ಕೇರಳದಲ್ಲಿ ಮತ್ತೊಂದು ನಿಫಾ ಸೋಂಕು ದೃಢ... 4ಕ್ಕೇರಿದ ಸಕ್ರಿಯ ಪ್ರಕರಣ

ಕೇರಳದಲ್ಲಿ ಮತ್ತೊಂದು ನಿಫಾ ಸೋಂಕು ದೃಢ... 4ಕ್ಕೇರಿದ ಸಕ್ರಿಯ ಪ್ರಕರಣ
Kerala Nipah Virus: ಕೇರಳದಲ್ಲಿ ಮತ್ತೊಂದು ನಿಫಾ ವೈರಸ್ ಪ್ರಕರಣ ದೃಢಪಟ್ಟಿದ್ದು, ಸೋಂಕಿನ ಸಕ್ರಿಯ ಪ್ರಕರಣಗಳು 4ಕ್ಕೆ ಏರಿಕೆಯಾಗಿದೆ.
ಕೊಯಿಕ್ಕೋಡ್(ಕೇರಳ): ಕೇರಳದ ಕೊಯಿಕ್ಕೋಡ್ನಲ್ಲಿ ಇಂದು (ಶುಕ್ರವಾರ) ಮತ್ತೊಂದು ನಿಫಾ ವೈರಸ್ ಪ್ರಕರಣ ದೃಢಪಟ್ಟಿದೆ. ಆಸ್ಪತ್ರೆಯಲ್ಲಿ ನಿಗಾದಲ್ಲಿದ್ದ 39 ವರ್ಷದ ವ್ಯಕ್ತಿಗೆ ನಿಫಾ ಸೋಂಕು ಪತ್ತೆಯಾಗಿದೆ. ಇದರೊಂದಿಗೆ ಕೇರಳದಲ್ಲಿ ನಿಫಾ ವೈರಸ್ ಸಕ್ರಿಯ ಪ್ರಕರಣಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ.
ಈ ಹಿಂದೆ ದೃಢಪಟ್ಟ ನಿಫಾ ವೈರಸ್ ಪ್ರಕರಣಗಳಿಗೆ ಚಿಕಿತ್ಸೆ ನೀಡಲಾಗಿದ್ದ ಖಾಸಗಿ ಆಸ್ಪತ್ರೆಯಲ್ಲಿ 39 ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸೋಂಕು ಲಕ್ಷಣಗಳು ಪತ್ತೆಯಾದ ನಂತರ ಅವರನ್ನು ಪ್ರತ್ಯೇಕಿಸಲಾಗಿದೆ. ಸದ್ಯ ಅವರಿಗೆ ಯಾವುದೇ ಗಂಭೀರ ಆರೋಗ್ಯ ಸಮಸ್ಯೆ ಇಲ್ಲ ಎಂದು ವೈದ್ಯರು ತಿಳಿಸಿದ್ದಾರೆ.
ನಿಫಾ ವೈರಸ್ ಹೆಚ್ಚುತ್ತಿರುವ ಹಿನ್ನೆಲೆ ರಾಜ್ಯ ಸರ್ಕಾರ ಕಟ್ಟುನಿಟ್ಟಿನ ಕ್ರಮ ಕೈಗೊಂಡಿದೆ. ಕೊಯಿಕ್ಕೋಡ್ ಜಿಲ್ಲೆಯಲ್ಲಿ ವೈರಸ್‌ನಿಂದ ಎರಡು ಸಾವು ದೃಢಪಟ್ಟ ನಂತರ, ಸೋಂಕು ತಡೆಗೆ ಮುನ್ನೆಚ್ಚರಿಕಾ ಕ್ರಮ ವಹಿಸಲಾಗಿದೆೆ. ಪುಣೆಯಲ್ಲಿರುವ ಇಂಡಿಯನ್ ಕೌನ್ಸಿಲ್ ಆಫ್ ಮೆಡಿಕಲ್ ರಿಸರ್ಚ್- ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ವೈರಾಲಜಿ (ಐಸಿಎಂಆರ್-ಎನ್‌ಐವಿ) ಹಾಗೂ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ರಾಜ್ಯ ಸಚಿವರಾದ ಡಾ. ಭಾರತಿ ಪ್ರವೀಣ್ ಪವಾರ್ ಅವರು ಸಮಗ್ರ ಕ್ರಮಕ್ಕೆ ಮುಂದಾಗಿದ್ದಾರೆ. ಈ ಕುರಿತು ಡಾ.ಪವಾರ್, ಪ್ರಧಾನಿ ನರೇಂದ್ರ ಮೋದಿ ಮತ್ತು ಆರೋಗ್ಯ ಸಚಿವ ಡಾ.ಮನ್ಸುಖ್ ಮಾಂಡವಿಯಾ ಅವರೊಂದಿಗೆ ಚರ್ಚೆ ನಡೆಸಿದ್ದಾರೆ. ಪರಿಸ್ಥಿತಿಯನ್ನು ನಿಕಟವಾಗಿ ಮೇಲ್ವಿಚಾರಣೆ ಮಾಡಲು ಮತ್ತು ಸೋಂಕು ತಡೆಗಟ್ಟುವ ಕ್ರಮ ಜಾರಿಗೆ ಭಾರತ ಸರ್ಕಾರ ಸನ್ನದ್ಧವಾಗಿದೆ ಎಂದು ಡಾ. ಭಾರತಿ ಪ್ರವೀಣ್ ಪವಾರ್ ತಿಳಿಸಿದ್ದಾರೆ.
ಆರೋಗ್ಯ ಇಲಾಖೆ ಮಾಹಿತಿ: ಕೇರಳದಲ್ಲಿ ಇತ್ತೀಚೆಗಷ್ಟೇ ನಿಫಾ ವೈರಸ್ ಹರಡಿದ್ದು, ಈ ನಿಟ್ಟಿನಲ್ಲಿ ಆರೋಗ್ಯ ಅಧಿಕಾರಿಗಳು ಕ್ಷಿಪ್ರ ಕಾರ್ಯಾಚರಣೆಗೆ ಮುಂದಾಗಿದ್ದಾರೆ. ಎರಡು ಅನುಮಾನಾಸ್ಪದ ಸಾವು ಪ್ರಕರಣಗಳ ಹಿನ್ನೆಲೆ ಕೇರಳದ ಆರೋಗ್ಯ ಇಲಾಖೆಯು ಕೊಯಿಕ್ಕೋಡ್ ಜಿಲ್ಲೆಗೆ ಮುನ್ನೆಚ್ಚರಿಕೆ ಕ್ರಮವಾಗಿ ಆರೋಗ್ಯ ಸಲಹೆಗಳನ್ನು ನೀಡಲಾಗಿದೆ. "ಕೊಯಿಕ್ಕೋಡ್ನಲ್ಲಿ ಎರಡು ಅಸ್ವಾಭಾವಿಕ ಸಾವುಗಳು ವರದಿಯಾಗಿವೆ. ಈ ಸಾವು ಪ್ರಕರಣಗಳು ನಿಫಾ ವೈರಸ್ ಸೋಂಕಿನಿಂದ ಸಂಭವಿಸಿವೆ ಎಂದು ಶಂಕಿಸಲಾಗಿದೆ" ಎಂದು ಆರೋಗ್ಯ ಇಲಾಖೆ ಹೇಳಿದೆ.
ಸರ್ಕಾರದಿಂದ ಮುನ್ನೆಚ್ಚರಿಕೆ ಕ್ರಮ: ಕೇರಳದಲ್ಲಿ ನಿಫಾ ವೈರಸ್ ಕ್ಷಿಪ್ರವಾಗಿ ಹರಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ವಿವಿಧ ಸಂಸ್ಥೆಗಳು ಮತ್ತು ತಜ್ಞರು ಸೋಂಕು ಹರಡುವಿಕೆಯನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಸಲಹೆ ನೀಡಿದ್ದಾರೆ. ಸರ್ಕಾರವು ಬಿಎಸ್ಎಲ್-3 ಪ್ರಯೋಗಾಲಯಗಳೊಂದಿಗೆ ಸುಸಜ್ಜಿತವಾದ ಉನ್ನತ ಮಟ್ಟದ ತಂಡಗಳ ನಿಯೋಜನೆ ಮಾಡಿದೆ. ಸೋಂಕು ಹರಡುವುದನ್ನು ತಡೆಗಟ್ಟಲು ಹಾಗೂ ಪ್ರಕರಣಗಳನ್ನು ತ್ವರಿತವಾಗಿ ಗುರುತಿಸಲು ಕ್ರಮ ವಹಿಸಲಾಗಿದೆ. ವೈರಸ್ ಹರಡುವಿಕೆ ನಿಯಂತ್ರಿಸುವ ಪೂರ್ವಭಾವಿ ಕ್ರಮಮವಾಗಿ ವಿವಿಧ ಕಡೆಗಳಲ್ಲಿ ಕ್ವಾರಂಟೈನ್ ಕೇಂದ್ರಗಳನ್ನು ತೆರೆಯಲಾಗಿದೆ. ಸಂಪರ್ಕ ಪತ್ತೆ ಹಚ್ಚುವಿಕೆ, ವಿಶೇಷ ಸಮಿತಿಗಳು ಮತ್ತು ಟೆಲಿಮೆಡಿಸಿನ್ ಸೇವೆಗಳು ಸೇರಿದಂತೆ ಸರ್ಕಾರದ ಮುನ್ನೆಚ್ಚರಿಕೆ ಕ್ರಮ ವಹಿಸಿದೆ.
