ಕರ್ನಾಟಕದಿಂದ ಇರಾನ್‌ವರೆಗೆ...: ಮುಸ್ಲಿಂ ರಾಷ್ಟ್ರದಲ್ಲಿ ಹಿಜಾಬ್‌ ವಿರೋಧಿಸಿ ಮಹಿಳೆಯರ ಒಕ್ಕೊರಲ ಧ್ವನಿ!

author img

By

Published : Sep 21, 2022, 8:30 AM IST

Updated : Sep 21, 2022, 12:31 PM IST

ಹಿಜಾಬ್‌  ಹೋರಾಟ

ಇರಾನ್‌ನಲ್ಲಿ ನಡೆದ ಮಹ್ಸಾ ಅಮಿನಿ ಎಂಬ ಯುವತಿಯ ಹತ್ಯೆಯನ್ನು ವಿರೋಧಿಸಿರುವ ಅಲ್ಲಿನ ಮಹಿಳೆಯರು ತಮ್ಮ ತಲೆಕೂದಲು ಕತ್ತರಿಸಿಕೊಂಡು, ಕಡ್ಡಾಯ ಹಿಜಾಬ್ ಧರಿಸುವ ನೀತಿಯ ವಿರುದ್ಧ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಿದ್ದಾರೆ.

ಹೈದರಾಬಾದ್: ಇರಾನ್‌ನ ಕಠಿಣ ಹಿಜಾಬ್ ಕಾನೂನುಗಳನ್ನು ಅನುಸರಿಸಲು ವಿಫಲವಾದ ಕಾರಣಕ್ಕಾಗಿ ಕಳೆದ ವಾರ ಟೆಹ್ರಾನ್‌ನಲ್ಲಿ ನೈತಿಕ ಪೊಲೀಸರಿಂದ ಬಂಧನಕ್ಕೊಳಗಾದ 22 ವರ್ಷದ ಯುವತಿ ಮಹ್ಸಾ ಅಮಿನಿ ಎಂಬುವರು ಕೋಮಾಕ್ಕೆ ಜಾರಿ ಬಳಿಕ ಸಾವನ್ನಪ್ಪಿದ್ದರು. ಆಕೆಯ ಸಾವನ್ನು ವಿರೋಧಿಸಿ ಇರಾನ್‌ನಲ್ಲಿ ಭಾರಿ ಪ್ರಮಾಣ ಪ್ರತಿಭಟನೆ ನಡೆಯುತ್ತಿದ್ದು ವಿಶ್ವಾದ್ಯಂತ ಇರಾನ್​ ಮಹಿಳೆಯರ ಹಕ್ಕುಗಳ ಬಗ್ಗೆ ವ್ಯಾಪಕ ಚರ್ಚೆ ನಡೆಯುತ್ತಿದೆ.

ತಲೆಕೂದಲು ಕತ್ತರಿಸಿ ಇರಾನ್ ಮಹಿಳೆಯರಿಂದ ತೀವ್ರ ಆಕ್ರೋಶ: ಅಮಿನಿ ಹತ್ಯೆಯನ್ನು ವಿರೋಧಿಸಿದ ಇರಾನ್ ಮಹಿಳೆಯರು ತಮ್ಮ ತಲೆಕೂದಲು ಕತ್ತರಿಸಿಕೊಂಡು, ಹಿಜಾಬ್ ತೆಗೆದು ಖಂಡನೆ ವ್ಯಕ್ತಪಡಿಸುವ ಮೂಲಕ ಭಾರಿ ಆಕ್ರೋಶ ಹೊರಹಾಕಿದ್ದಾರೆ. 2005 ರಲ್ಲಿ ಜಾರಿಗೆ ತಂದ ನಿಯಮಗಳ ಪ್ರಕಾರ, ದೇಶದ ನೈತಿಕ ಪೊಲೀಸರು ಹಿಜಾಬ್ ಕಾನೂನುಗಳನ್ನು ಹೇರುವ ಜವಾಬ್ದಾರಿ ಹೊಂದಿದ್ದಾರೆ. ಅಯತೊಲ್ಲಾ ಖಮೇನಿಯ ಇಸ್ಲಾಮಿಕ್ ರೆಸಿಸ್ಟೆನ್ಸ್ ಮೂವ್‌ಮೆಂಟ್ 1979 ರಲ್ಲಿ ಜನಾಭಿಪ್ರಾಯ ಸಂಗ್ರಹಿದ ಬಳಿಕ ದೇಶದಲ್ಲಿ ಮಹಿಳೆಯರು ಹಿಜಾಬ್​ ಧರಿಸುವುದು ಅಂದರೆ ತಲೆಯನ್ನು ಸಂಪೂರ್ಣವಾಗಿ ಬಟ್ಟೆಯಿಂದ ಮುಚ್ಚಿಕೊಳ್ಳುವುದನ್ನು ಕಡ್ಡಾಯಗೊಳಿಸಿತ್ತು.

ಇದನ್ನೂ ಓದಿ: ಹಿಜಾಬ್​ ಧರಿಸದ್ದಕ್ಕೆ ನೈತಿಕ ಪೊಲೀಸ್​ಗಿರಿ.. ಚಿತ್ರಹಿಂಸೆಗೆ ನರಳಿ ಕೋಮಾದಲ್ಲೇ ಪ್ರಾಣಬಿಟ್ಟ ಯುವತಿ!

'ಲಿಂಗ ತಾರತಮ್ಯದ ಕ್ರಮದಿಂದ ಬೇಸತ್ತು ಹೋಗಿದ್ದೇವೆ': ಅಂದಿನಿಂದ ದೇಶದಲ್ಲಿ ಕಠಿಣ ಇಸ್ಲಾಮಿಕ್ ಕಾನೂನುಗಳು ಜಾರಿಯಲ್ಲಿವೆ. ಮಹಿಳೆಯರು ತಮ್ಮ ಮನೆಯಿಂದ ಹೊರ ಹೋದಾಗ ಬಟ್ಟೆಯಿಂದ ತಲೆ ಮುಚ್ಚಿಕೊಳ್ಳುವುದು ಕಡ್ಡಾಯ. ಚಿಕ್ಕ ವಯಸ್ಸಿನಿಂದಲೇ ನಾವು ಹಿಜಾಬ್ ಧರಿಸದೇ ಹೋದರೆ ನಮಗೆ ಶಾಲೆಗೆ ಹೋಗುವ ಅವಕಾಶವಿಲ್ಲ ಮತ್ತು ನೌಕರಿಯೂ ಸಿಗುವುದಿಲ್ಲ, ಲಿಂಗ ತಾರತಮ್ಯದ ಈ ಆಳ್ವಿಕೆಯಿಂದ ನಾವು ಬೇಸತ್ತು ಹೋಗಿದ್ದೇವೆ ಎಂದು ಪ್ರತಿಭಟನಾನಿರತ ಕೆಲ ಮಹಿಳೆಯರು ಆಕ್ರೋಶ ಹೊರಹಾಕಿದ್ದಾರೆ.

ಇರಾನ್‌ ಕಠಿಣ ಹಿಜಾಬ್ ಕಾನೂನು ಹೇಗಿದೆ?: ಇರಾನ್‌ನ ಶರಿಯಾ ಅಥವಾ ಇಸ್ಲಾಮಿಕ್ ಕಟ್ಟಳೆಗಳ ಪ್ರಕಾರ, ಮಹಿಳೆಯರು ತಮ್ಮ ತಲೆಗೂದಲನ್ನು ಮುಚ್ಚಬೇಕು ಮತ್ತು ಸಡಿಲವಾದ ಬಟ್ಟೆಗಳನ್ನು ಧರಿಸಬೇಕು. ಇದನ್ನು ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಶಿಕ್ಷಿಸಲಾಗುತ್ತದೆ ಅಥವಾ ಜುಲ್ಮಾನೆ ವಿಧಿಸಲಾಗುತ್ತದೆ. ಅಷ್ಟೇ ಸೆರೆಮನೆಗೂ ಕಳಿಸಲಾಗುತ್ತದೆ. ಆದರೆ ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಹೋರಾಟಗಾರರು ಕಠಿಣ ನಿಯಮ ಮತ್ತು ‘ಅನೈತಿಕ ವರ್ತನೆ’ ಅಂತ ಪೊಲೀಸರು ಕ್ರಮ ಜರುಗಿಸುತ್ತಿದ್ದರೂ ಹಿಜಾಬ್‌ಗಳನ್ನು ತ್ಯಜಿಸಿರಿ ಎಂದು ಮಹಿಳೆಯರನ್ನು ಆಗ್ರಹಿಸುತ್ತಿದ್ದಾರೆ.

ಇದನ್ನೂ ಓದಿ: ಹಿಜಾಬ್ ಧರಿಸಿ ಓಣಂ ಆಚರಿಸಿದ ವಿದ್ಯಾರ್ಥಿನಿಯರು: ವಿಡಿಯೋ ವೈರಲ್​

ಜಗತ್ತಿನೆಲ್ಲೆಡೆಯಿಂದ ಹಿಜಾಬ್‌ಗೆ ವಿರೋಧ: ಇಸ್ಲಾಮಿಕ್ ಕಾನೂನು ಅಳವಡಿಕೆ ಕುರಿತು ಭುಗಿಲೆದ್ದ ಪ್ರತಿಭಟನೆಗೆ ಇತರೆ ದೇಶಗಳಲ್ಲಿ ನೆಲೆಸಿರುವ ಇರಾನಿಯನ್​ ಮಹಿಳೆಯರೂ ಸಹ ಬೆಂಬಲ ಸೂಚಿಸಿದ್ದಾರೆ. ಇರಾನಿನ ಪತ್ರಕರ್ತ ಮಸಿಹ್ ಅಲಿನೆಜಾದ್ ಸದ್ಯಕ್ಕೆ ಯುಎಸ್​ನಲ್ಲಿ ನೆಲೆಸಿದ್ದು, ಅವರನ್ನು 1994 ರಲ್ಲಿ ಟೆಹ್ರಾನ್‌ನಲ್ಲಿ ಸರ್ಕಾರಿ ವಿರೋಧಿ ಕರಪತ್ರಗಳನ್ನು ಮುದ್ರಿಸಿದ್ದಕ್ಕಾಗಿ ಬಂಧಿಸಲಾಗಿತ್ತು. ಇರಾನಿನ ಮಹಿಳೆಯರಿಗೆ ಸಂಬಂಧಿಸಿದ ಹಿಜಾಬ್ ನಿಯಮಗಳು ಮತ್ತು ಇತರೆ ಹಕ್ಕುಗಳ ವಿರುದ್ಧ ಅವರು ಧ್ವನಿಯೆತ್ತಿದ್ದರು. ಕುತೂಹಲಕಾರಿ ವಿಷಯವೇನೆಂದ್ರೆ, ಅಲ್ಲಿ ಕೇವಲ ಹಿಜಾಬ್​ ನಿಯಮಗಳಷ್ಟೇ ಮಹಿಳೆಯರ ಮೇಲೆ ಹೇರಲಾಗುತ್ತಿಲ್ಲ, ಜೊತೆಗೆ ಮಹಿಳೆಯರು ಒಬ್ಬಂಟಿಯಾಗಿ ಹಾಡುಗಳನ್ನು ಹಾಡುವುದಕ್ಕೂ ಸಹ ಕಡಿವಾಣ​ ಹಾಕಲಾಗಿದೆ.

ಮಹಿಳೆಯರಿಗೆ ಸರ್ಕಾರ, ನೈತಿಕ ಪೊಲೀಸರ ಕಿರುಕುಳ: ಮಹಿಳೆಯರ ಸಾರ್ವಜನಿಕ ಹಾಡುಗಾರಿಕೆ ಮೇಲೆ ನಿಷೇಧ ಕಾನೂನುಗಳನ್ನು ಜಾರಿಗೆ ತಂದ ಕಾರಣದಿಂದ ರಾಷ್ಟ್ರದ ಅತ್ಯುತ್ತಮ ಮಹಿಳಾ ಗಾಯಕಿಯರು ಹೊರ ಪ್ರಪಂಚಕ್ಕೆ ಅಪರಿಚಿತರಾಗಿದ್ದಾರೆ. ಕ್ಯಾಸ್ಪಿಯನ್ ಸಮುದ್ರದುದ್ದಕ್ಕೂ ಇರುವ ಗಿಲಾನ್ ಪ್ರಾಂತ್ಯದ ರಾಶ್ಟ್‌ನಂತಹ ಸ್ಥಳಗಳು ಯಾವುದೇ ಯುರೋಪಿಯನ್ ರಾಷ್ಟ್ರಕ್ಕಿಂತ ಕಡಿಮೆ ಇಲ್ಲ. ಆದರೆ, ಸರ್ಕಾರದ ಕಿರುಕುಳಕ್ಕೆ ಹೆದರಿರುವ ಮಹಿಳೆಯರು ಮನೆಯಿಂದ ಆಚೆ ಕಾಲಿಟ್ಟು ಧೈರ್ಯ ತೋರುವ ಸಾಹಸಕ್ಕೆ ಕೈಹಾಕುತ್ತಿಲ್ಲ.

ಇರಾನ್ ಮಹಿಳೆಯರಿಂದ ನಿರ್ಭೀತ ಆಕ್ರೋಶ, ಪ್ರತಿಭಟನೆ: ಮಹ್ಸಾ ಅವರ ಸಾವಿನ ಬಳಿಕ ಇರಾನಿನ ಮಹಿಳೆಯರು ಸರ್ಕಾರದ ಬಗ್ಗೆ ಮತ್ತು ಮಾನವ ಹಕ್ಕುಗಳ ನೀತಿಗಳ ಬಗ್ಗೆ ಸಾರ್ವಜನಿಕವಾಗಿ ಆಕ್ರೋಶ ಬಹಿರಂಗಪಡಿಸುತ್ತಿದ್ದಾರೆ. ರಾಷ್ಟ್ರದ ಕಟ್ಟುನಿಟ್ಟಾದ ಧಾರ್ಮಿಕ ನಿಯಮಗಳನ್ನು ಧಿಕ್ಕರಿಸಿ ಬರೀ ತಲೆ ಮತ್ತು ತಲೆಗೆ ರುಮಾಲು ಸುತ್ತಿರುವುದನ್ನು ಬೀಸುತ್ತಿರುವ ವಿಡಿಯೋಗಳು ವೈರಲ್ ಆಗಿವೆ. ಸರ್ಕಾರದ ವಿರುದ್ಧ ನಿರ್ಭೀತಿಯಿಂದ ಇರಾನ್ ಮಹಿಳೆಯರು ಆಕ್ರೋಶ ವ್ಯಕ್ತಪಡಿಸುತ್ತಿರುವ ವಿಧಾನ ಇಡೀ ಜಗತ್ತನ್ನೇ ಬೆಚ್ಚಿ ಬೀಳಿಸಿದೆ.

ಇದನ್ನೂ ಓದಿ: ಹಿಜಾಬ್ ವಿವಾದ: ಕಾಲೇಜುಗಳಿಂದ ಟಿಸಿ ವಾಪಸ್​ ಪಡೆಯುತ್ತಿರುವ ವಿದ್ಯಾರ್ಥಿನಿಯರು

ನೈತಿಕ ಪೊಲೀಸ್‌ಗಿರಿಯ ವಿರುದ್ಧ ಕ್ರಮಕ್ಕೆ ಆಗ್ರಹ: ಇರಾನ್ ಅಧ್ಯಕ್ಷರು ಮಹ್ಸಾ ಸಾವಿನ ಕುರಿತು ತನಿಖೆಗೆ ಆದೇಶಿಸಿದ್ದರೂ ಸಹ ಪ್ರತಿಭಟನಾನಿರತ ಮಹಿಳೆಯರ ಹೋರಾಟ ತಣ್ಣಗಾಗಿಲ್ಲ. ಮಹ್ಸಾ ಸಾವಿಗೆ ಕಾರಣರಾದ 'ನೈತಿಕ ಪೊಲೀಸ್' ಶ್ರೇಣಿಯ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

ಇರಾನ್‌ನ ಎರಡು ಪ್ರಮುಖ ನಗರಗಳಾದ ಕೋಮ್ ಮತ್ತು ಮಶ್ಹದ್ ಧಾರ್ಮಿಕ ಮುಖಂಡರು ಆಳುವ ಸ್ಥಳಗಳು. ಇಲ್ಲಿ ಮಹಿಳೆಯರು ತಲೆಯಿಂದ ಪಾದದವರೆಗೂ ಮುಸುಕು ಧರಿಸುತ್ತಾರೆ ಮತ್ತು ಅವರ ದೇಹದ ಯಾವುದೇ ಭಾಗಗಳು ಗೋಚರಿಸುವುದಿಲ್ಲ. ಪ್ರತಿ ವರ್ಷ ಮಹಿಳಾ ವಿದ್ವಾಂಸರು ಸೇರಿದಂತೆ ನೂರಾರು ಇಸ್ಲಾಮಿಕ್ ವಿದ್ವಾಂಸರು ಇಲ್ಲಿ ಕಠಿಣ ಕಾನೂನುಗಳ ಕುರಿತು ಬೋಧಿಸುತ್ತಾರೆ. ಸೆಮಿನರಿಗಳನ್ನು ಹೌಸ್-ಎ-ಕೋಮ್ ಮತ್ತು ಹೌಸ್-ಎ-ಮಶ್ಹದ್ ಎಂದು ಕರೆಯಲಾಗುತ್ತದೆ. ಆದ್ರೆ ಈ ಬಾರಿ ಈ ಎರಡೂ ನಗರಗಳು ಪ್ರತಿಭಟನಾನಿರತ ಮಹಿಳೆಯರ ಮುಂದೆ ಶರಣಾಗಿವೆ ಎನ್ನಲಾಗಿದೆ.

ಹಿಜಾಬ್ ಧರಿಸದೇ ಸ್ವತಂತ್ರವಾಗಿ ಬದುಕುವ ಹಂಬಲ: ಇರಾನ್‌ನಂತಹ ಇಸ್ಲಾಮಿಕ್ ರಾಷ್ಟ್ರದ ಮುಸ್ಲಿಂ ಮಹಿಳೆಯರನ್ನು ಜಾತ್ಯತೀತ ಭಾರತದ ಮುಸ್ಲಿಂ ಮಹಿಳೆಯೊಂದಿಗೆ ಹೋಲಿಸಿದಾಗ ಸಾಕಷ್ಟು ಬದಲಾವಣೆ ಕಾಣಬಹುದು. ಇಸ್ಲಾಮಿಕ್ ರಾಷ್ಟ್ರದಲ್ಲಿ ಬಹತೇಕ ಮಹಿಳೆಯರು ಹಿಜಾಬ್ ಧರಿಸದೇ ಸ್ವಾತಂತ್ರ್ಯವಾಗಿ ಬದುಕಲು ಹಂಬಲಿಸುತ್ತಿದ್ದಾರೆ. ಅಂತೆಯೇ, ಭಾರತದಲ್ಲಿ ಕೆಲವು ಶೇಕಡಾವಾರು ಮುಸ್ಲಿಂ ಮಹಿಳೆಯರು ಹಿಜಾಬ್‌ ಬೇಕೆಂದು ಪ್ರತಿಪಾದಿಸುತ್ತಿದ್ದಾರೆ.

ಇದನ್ನೂ ಓದಿ: ಈ ವರ್ಷ ಹಳೆಯ ವಸ್ತ್ರಸಂಹಿತೆ ಮುಂದುವರಿಸಿ: ಮಂಗಳೂರು ವಿವಿಯ ಹಿಜಾಬ್ ಪರ ವಿದ್ಯಾರ್ಥಿನಿ ಬೇಡಿಕೆ

ಕರ್ನಾಟಕದ ಹಿಜಾಬ್ ಪ್ರಕರಣ: ಕರ್ನಾಟಕದಲ್ಲಿ ಸರ್ಕಾರವು ಶಾಲೆಗಳು ಮತ್ತು ಕಾಲೇಜುಗಳಲ್ಲಿ ಮುಸುಕು(ಹಿಜಾಬ್) ಧರಿಸುವುದನ್ನು ನಿಷೇಧಿಸಿದ ನಂತರ ಅನೇಕ ಮುಸ್ಲಿಂ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್‌ಗೆ ಮೊರೆ ಹೋಗಿದ್ದಾರೆ. ಇರಾನ್​ನಲ್ಲಿ ಮಹಿಳೆಯರು ಹಿಜಾಬ್‌ ಹರಿದು ಹಾಕುವುದನ್ನು ನೋಡಿದ್ದರೆ, ಭಾರತದಲ್ಲಿ ಕಾಲೇಜಿಗೆ ಹೋಗುವ ಯುವತಿಯರು ಹಿಜಾಬ್‌ ಬೇಕೆಂದು ಪ್ರತಿಭಟಿಸುವುದನ್ನು ನಾವು ನೋಡುತ್ತಿದ್ದೇವೆ.

Last Updated :Sep 21, 2022, 12:31 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.