ವ್ಯಾಲೆಂಟೈನ್ ದಿನ ಬಾಯ್ಫ್ರೆಂಡ್ ಜೊತೆ ಬರದಿದ್ರೆ ನೋ ಎಂಟ್ರಿ; ನೋಟಿಸ್ ವೈರಲ್ ಆಗ್ತಿದ್ದಂತೆ ಕಾಲೇಜ್ ಅಲರ್ಟ್

ವ್ಯಾಲೆಂಟೈನ್ ದಿನ ಬಾಯ್ಫ್ರೆಂಡ್ ಜೊತೆ ಬರದಿದ್ರೆ ನೋ ಎಂಟ್ರಿ; ನೋಟಿಸ್ ವೈರಲ್ ಆಗ್ತಿದ್ದಂತೆ ಕಾಲೇಜ್ ಅಲರ್ಟ್
ಪ್ರೇಮಿಗಳ ದಿನದಂದು ಹುಡುಗಿಯರು ಬಾಯ್ ಫ್ರೆಂಡ್ ಜೊತೆ ಬರದಿದ್ರೆ ಪ್ರವೇಶ ನಿರಾಕರಣೆ - ನೋಟಿಸ್ ವೈರಲ್ - ಎಚ್ಚೆತ್ತುಕೊಂಡ ಕಾಲೇಜು ಆಡಳಿತ ಮಂಡಳಿಯಿಂದ ಸ್ಪಷ್ಟನೆ
ಜಗತ್ಸಿಂಗಪುರ್: ಪ್ರೇಮಿಗಳ ದಿನದಂದು ವಿದ್ಯಾರ್ಥಿನಿಯರು ಬಾಯ್ ಫ್ರೆಂಡ್ ಜೊತೆ ಕಾಲೇಜಿಗೆ ಬನ್ನಿ. ಬಾಯ್ ಫ್ರೆಂಡ್ ಇರದೇ ಕಾಲೇಜಿಗೆ ಬರಲು ಮಂದಾದರೆ ಅವರಿಗೆ ಪ್ರವೇಶಕ್ಕೆ ಅನುಮತಿ ಇಲ್ಲ. ಹೀಗೊಂದು ವಿಚಿತ್ರ ರೀತಿಯ ನೋಟಿಸ್ ಅನ್ನು ಒಡಿಶಾದ ಜಗತ್ಸಿಂಗ್ಪುರ್ನ ಸ್ವಾಮಿ ವಿವೇಕಾನಂದ ಮೆಮೋರಿಯಲ್ ಸ್ವಾಯತ್ತ ಕಾಲೇಜು ಎಸ್ವಿಎಂ ಕಾಲೇಜ್ ಹೊರಡಿಸಿದ್ದು, ವಿದ್ಯಾರ್ಥಿಗಳನ್ನು ಬೆಚ್ಚಿಬೀಳಿಸಿದೆ. ಈ ನೋಟಿಸ್ಗೆ ಅಧಿಕೃತವಾಗಿ ಕಾಲೇಜು ಪ್ರಿನ್ಸಿಪಾಲ್ ಕೂಡ ಸಹಿ ಮಾಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಆದರೆ, ಈ ಬಗ್ಗೆ ಸುದ್ದಿಯಾಗುತ್ತಿದ್ದಂತೆ ಪ್ರಿನ್ಸಿಪಾಲರು ಈ ನೋಟಿಸ್ಗೆ ತಾವು ಸಹಿ ಹಾಕಿಲ್ಲ. ಇದು ದುರುದ್ದೇಪೂರ್ವಕವಾಗಿ ಮಾಡಿರುವ ಕೃತ್ಯ ಎಂದು ತಮ್ಮ ಮೇಲಿನ ಆರೋಪವನ್ನು ತಳ್ಳಿಹಾಕಿದ್ದಾರೆ.
ಏನಿದು ನೋಟಿಸ್: 'ಪ್ರೇಮಿಗಳ ದಿನವಾದ ಫೆಬ್ರವರಿ 14ರೊಳಗೆ ಎಲ್ಲಾ ಯುವತಿಯರು ಕನಿಷ್ಟ ಪಕ್ಷ ಒಬ್ಬ ಬಾಯ್ಫ್ರೆಂಡ್ ಅನ್ನು ಹೊಂದಿರಬೇಕು. ಇದು ರಕ್ಷಣೆ ದೃಷ್ಟಿಯಿಂದ ಮಾಡಲಾಗಿದೆ. ಬಾಯ್ ಫ್ರೆಂಡ್ ಹೊಂದಿಲ್ಲದ ವಿದ್ಯಾರ್ಥಿನಿಯರಿಗೆ ಕಾಲೇಜಿನ ಆವರಣದಲ್ಲಿ ಯಾವುದೇ ಕಾರಣಕ್ಕೂ ಪ್ರವೇಶ ಇಲ್ಲ. ಕಾಲೇಜಿಗೆ ಪ್ರವೇಶ ಮಾಡುವ ಮುನ್ನ ಯುವತಿಯರು ತಮ್ಮ ಬಾಯ್ಫ್ರೆಂಡ್ ಜೊತೆಗಿನ ಇತ್ತೀಚಿನ ಫೋಟೋವನ್ನು ತೋರಿಸಬೇಕು. ಪ್ರೀತಿ ಹಂಚಿ..' ಎಂಬ ನೋಟಿಸ್ ಎಸ್ವಿಎಂ ಕಾಲೇಜಿನಿಂದ ಹೊರ ಬಿದ್ದಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಈ ಸುದ್ದಿ ತಿಳಿಯುತ್ತಿದ್ದಂತೆ ಕಾಲೇಜು ಆಡಳಿತ ಮಂಡಳಿ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದೆ. ಈ ಸಂಬಂಧ ಕಾಲೇಜು ಪ್ರಾಂಶುಪಾಲರು ಸೋಮವಾರ ಸಂಜೆ ಜಗತ್ಸಿಂಗ್ಪುರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ನೋಟಿಸ್ನಲ್ಲಿ ಪ್ರಿನ್ಸಿಪಾಲರ ಸಹಿ ಹೊಂದಿದ್ದು, ಎಸ್ವಿಎಂ ಕಾಲೇಜು ಮತ್ತು ಇಲ್ಲಿನ ಪ್ರಾಂಶುಪಾಲರು ಸುದ್ದಿಯಾಗಿದ್ದಾರೆ. ಪ್ರೇಮಿಗಳ ದಿನದಂದು ವಿದ್ಯಾರ್ಥಿನಿಯರು ಬಾಯ್ಫ್ರೆಂಡ್ ಜೊತೆ ಬರಬೇಕು. ಹಳೆಯ ಗೆಳೆಯನ ಜೊತೆಯಾದರೂ ಬರಬೇಕು ಎಂಬ ನೋಟಿಸ್ಗೆ ಅನೇಕ ವಿದ್ಯಾರ್ಥಿಗಳ ಅಸಮಾಧಾನಕ್ಕೆ ಕಾರಣವಾಗಿದ್ದು, ಇದು ಕಾಲೇಜಿನ ಹೆಸರು ಕೆಡಿಸಬೇಕು ಎಂದು ಮಾಡಿರುವ ಕೃತ್ಯ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಈ ಘಟನೆ ಕುರಿತು ಮಾತನಾಡಿರುವ ಕಾಲೇಜಿನ ಪ್ರಾಂಶುಪಾಲರಾದ ವಿಜಯ್ ಕುಮಾರ್ ಪತ್ರ, ನನ್ನ ಹೆಸರಿನಲ್ಲಿ ತಪ್ಪಾದ ನೋಟಿಸ್ ಅನ್ನು ಹಂಚಲಾಗಿದೆ. ಇದು ಸಂಪೂರ್ಣವಾಗಿ ಸುಳ್ಳಾಗಿದೆ. ಈ ಸುದ್ದಿ ಕುರಿತು ಮಾತನಾಡುವುದು ಕೂಡ ಸರಿಯಲ್ಲ. ನನಗೆ ತಿಳಿಯದಂತೆ ಯಾರೋ ಈ ಕೆಲಸ ಮಾಡಿದ್ದಾರೆ. ಇದು ನಮ್ಮ ಕಾಲೇಜಿನಿಂದಲೂ ಅಲ್ಲ. ನೋಟಿಸ್ನಲ್ಲಿರುವ ಲೆಟರ್ ಹೆಡ್ ಆಗಲಿ, ನಂಬರ್ ಆಗಲಿ ನಮ್ಮ ಕಾಲೇಜಿನದ್ದಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಘಟನೆ ಕುರಿತು ಪ್ರತಿಕ್ರಿಯಿಸಿರುವ ಎಸ್ವಿಎಂ ಕಾಲೇಜು ವಿದ್ಯಾರ್ಥಿನಿ ರಶ್ಮಿತಾ ಬೆಹ್ರಾ, ಈ ವೈರಲ್ ನೋಟಿಸ್ ಅನ್ನು ನಾವೆಲ್ಲಾ ನೋಡಿದ್ದೇವೆ. ಇದು ನಿಜ ಎಂಬಂತೆ ಕಾಡುತ್ತಿದೆ. ಯಾರೋ ಬೇಕು ಅಂತಲೇ ದುರುದ್ದೇಶದಿಂದ ಈ ನೋಟಿಸ್ ಅನ್ನು ವೈರಲ್ ಮಾಡಿದ್ದಾರೆ. ನಮ್ಮ ಕಾಲೇಜು ಮತ್ತು ಪ್ರಿನ್ಸಿಪಾಲರಿಗೆ ಕೆಟ್ಟ ಹೆಸರು ತರಬೇಕು ಎಂಬ ಉದ್ದೇಶದಿಂದ ಈ ಕೃತ್ಯ ಮಾಡಿದ್ದಾರೆ ಎಂದು ಹೇಳಿದ್ದಾರೆ. 2021ರಲ್ಲೂ ಕೂಡ ಇದೇ ರೀತಿಯ ನೋಟಿಸ್ ಆಗ್ರಾ ಕಾಲೇಜ್ ಮತ್ತು ಚೆನ್ನೈನ ಎಸ್ಆರ್ ವಿಶ್ವವಿದ್ಯಾಲಯದಲ್ಲಿ ವೈರಲ್ ಆಗಿದ್ದವು.
ಇದನ್ನೂ ಓದಿ: ಹೈದರಾಬಾದ್ ಕೇಂದ್ರೀಯ ವಿವಿಯಲ್ಲಿ ನಿಷೇಧಿತ ಬಿಬಿಸಿ ಸಾಕ್ಷ್ಯಚಿತ್ರ ಪ್ರದರ್ಶನ
