ಬೀದಿ ನಾಯಿಗಳಿಗೆ ಆಹಾರ ಹಾಕುವವರೇ ಹುಷಾರ್​.. ಅವು ಯಾರಿಗಾದ್ರು ಕಚ್ಚಿದ್ರೆ ನೀವೇ ಹೊಣೆ ಎಂದ ಸುಪ್ರೀಂ

author img

By

Published : Sep 10, 2022, 11:15 AM IST

stray dogs attack people  feed them could be held liable  stray dogs attack case in supreme court  ಬೀದಿ ನಾಯಿಗಳ ಹಾವಳಿ  ಬೀದಿ ನಾಯಿಗಳಿಗೆ ಆಹಾರ  ನಿಯಂತ್ರಣಕ್ಕೆ ಸುಪ್ರೀಂಕೋರ್ಟ್​ ಮಹತ್ವದ ನಿರ್ಣಯ  ಬೀದಿನಾಯಿಗಳ ಹಾವಳಿಗೆ ಪರಿಹಾರ

ಬೀದಿ ನಾಯಿಗಳ ಹಾವಳಿ ದಿನದಿಂದ ಹೆಚ್ಚಾಗುತ್ತಿದೆ. ಈ ಹಾವಳಿ ನಿಯಂತ್ರಣಕ್ಕೆ ಸುಪ್ರೀಂಕೋರ್ಟ್​ ಮಹತ್ವದ ನಿರ್ಣಯಕ್ಕೆ ಬಂದಿದೆ. ಇನ್ಮುಂದೆ ಬೀದಿ ನಾಯಿಗಳಿಗೆ ಆಹಾರ ಹಾಕುವವರು ಆ ನಾಯಿಗೆ ಗುರುತು ಮಾಡಲು ಸಲಹೆ ನೀಡಿದೆ.

ನವದೆಹಲಿ: ಬೀದಿನಾಯಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳುವಾಗ ಸುಪ್ರೀಂಕೋರ್ಟ್​ ಮಹತ್ವದ ನಿರ್ಣಯಕ್ಕೆ ಬಂದಿದೆ. ಬೀದಿ ನಾಯಿಗಳು ಜನರ ಮೇಲೆ ದಾಳಿ ಮಾಡಿದ್ರೆ ಅದಕ್ಕೆ ಹಾಕುವ ಲಸಿಕೆ ಮತ್ತು ತಗಲುವ ಚಿಕಿತ್ಸೆ ವೆಚ್ಚ ಬೀದಿ ನಾಯಿಗಳಿಗೆ ನಿತ್ಯ ಆಹಾರ ನೀಡುವವರೇ ಭರಿಸಬೇಕಾಗುತ್ತದೆ ಎಂದು ಸುಪ್ರೀಂಕೋರ್ಟ್​ ಹೇಳಿದೆ.

ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ ಮತ್ತು ಜೆಕೆ ಮಹೇಶ್ವರಿ ಅವರ ಪೀಠವು ಕೇರಳದಲ್ಲಿ ಬೀದಿ ನಾಯಿಗಳ ಹಾವಳಿಗೆ ಸಂಬಂಧಿಸಿದ ಅರ್ಜಿಗಳ ವಿಚಾರಣೆ ವೇಳೆ ಈ ನಿರ್ಣಯಕ್ಕೆ ಬಂದಿತು. ಅನೇಕರು ಶ್ವಾನ ಪ್ರಿಯರಾಗಿದ್ದಾರೆ. ಬೀದಿನಾಯಿಗಳಿಗೆ ಆಹಾರ ಹಾಕುತ್ತಾರೆ. ತಾವು ಆಹಾರ ಹಾಕುವ ನಾಯಿಯ ಮೇಲೆ ಸಂಖ್ಯೆ ಅಥವಾ ಗುರುತು ಹಾಕಬೇಕು. ಆ ನಾಯಿಗಳು ಬೇರೆ ವ್ಯಕ್ತಿಯ ಮೇಲೆ ದಾಳಿ ಮಾಡಿದ್ರೆ ಅವರಿಗೆ ಲಸಿಕೆ ಹಾಕುವ ಹಾಗೂ ಚಿಕಿತ್ಸೆಗೆ ತಗಲುವ ವೆಚ್ಚವನ್ನು ಶ್ವಾನಕ್ಕೆ ಆಹಾರ ನೀಡುವವರೇ ಭರಿಸಬೇಕೆಂದು ನ್ಯಾಯಮೂರ್ತಿ ಸಂಜೀವ ಖನ್ನಾ ಹೇಳಿದ್ದಾರೆ.

ಬೀದಿ ನಾಯಿಗಳ ಹಾವಳಿಗೆ ಪರಿಹಾರ ಕಂಡುಕೊಳ್ಳುವುದು ಅಗತ್ಯವಾಗಿದೆ. ಅವುಗಳಿಗೆ ಆಹಾರ ನೀಡುವ ಜನರ ನಡುವೆ ಸಮತೋಲನವನ್ನು ಕಾಯ್ದುಕೊಳ್ಳುವ ಅಗತ್ಯವಿದೆ. ಅದೇ ರೀತಿ ಬೀದಿ ನಾಯಿಗಳ ದಾಳಿಯಿಂದ ಅಮಾಯಕ ಜನರನ್ನು ರಕ್ಷಿಸುವ ಅಗತ್ಯವೂ ಇದೆ ಎಂದು ಒತ್ತಿ ಹೇಳಿದ ಪೀಠ ರೇಬಿಸ್ ಸೋಂಕಿತ ನಾಯಿಗಳನ್ನು ಸಂಬಂಧಪಟ್ಟ ಅಧಿಕಾರಿಗಳು ಆರೈಕೆ ಕೇಂದ್ರದಲ್ಲಿ ಇರಿಸಬೇಕು ಎಂದು ನ್ಯಾಯಮೂರ್ತಿಗಳು ಸೂಚಿಸಿದರು.

ವಕೀಲ ವಿ.ಕೆ. ಬಿಜು ಸುಪ್ರೀಂ ಕೋರ್ಟ್‌ನಲ್ಲಿ ಬೀದಿ ನಾಯಿಗಳ ದಾಳಿಯ ವಿಷಯವನ್ನು ಪ್ರಸ್ತಾಪಿಸಿದ್ದರು. ಸಾರ್ವಜನಿಕ ಸ್ಥಳಗಳಲ್ಲಿ ಶಾಲಾ ಮಕ್ಕಳು ಮತ್ತು ಮಹಿಳೆಯರ ಮೇಲೆ ನಾಯಿಗಳ ದಾಳಿ ನಡೆಯುತ್ತಿದೆ ಎಂದು ಆಗಸ್ಟ್​ 8ರವರೆಗಿನ ವರದಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇತ್ತೀಚೆಗೆ ಕೇರಳದಲ್ಲಿ 12 ವರ್ಷದ ಬಾಲಕಿಯ ಸಾವನ್ನು ಸುಪ್ರೀಂನಲ್ಲಿ ವಿವರಿಸಿದರು.

ಕೇರಳ ಸರ್ಕಾರವನ್ನು ಪ್ರತಿನಿಧಿಸುವ ವಕೀಲರು ಸ್ಥಳೀಯ ಸಂಸ್ಥೆಗಳ ಕಾನೂನುಗಳಿಗೆ ಅನುಗುಣವಾಗಿ ಬೀದಿನಾಯಿಗಳ ಸಂಖ್ಯೆಯನ್ನು ಕಡಿಮೆ ಮಾಡಲು 2015 ರಲ್ಲಿ ಕೇರಳ ಹೈಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲೇಖಿಸಿದರು. ನಾಯಿಗಳ ದಾಳಿ ಮತ್ತು ಕೇರಳದಲ್ಲಿ ಸಂತ್ರಸ್ತರಿಗೆ ಪರಿಹಾರ ವಿತರಣೆಯ ಬಗ್ಗೆ ದೂರುಗಳನ್ನು ಪರಿಶೀಲಿಸಲು 2016 ರಲ್ಲಿ ಸುಪ್ರೀಂ ಕೋರ್ಟ್ ರಚಿಸಿದ್ದ ಶ್ರೀ ಜಗನ್ ಆಯೋಗಕ್ಕೆ ವರದಿ ಸಲ್ಲಿಸುವಂತೆ ನ್ಯಾಯಾಲಯ ಕೇಳಿದೆ. ವಾದಗಳನ್ನು ಆಲಿಸಿದ ನಂತರ, ಸುಪ್ರೀಂ ಕೋರ್ಟ್ ಈ ವಿಷಯವನ್ನು ಸೆಪ್ಟೆಂಬರ್ 28ಕ್ಕೆ ವಿಚಾರಣೆ ಮುಂದೂಡಿ ಪ್ರಾಣಿ ದಯಾ ಸಂಘಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಮಾಡಿಕೊಟ್ಟಿತು.

ಓದಿ: ನವಜಾತ ಶಿಶುವಿನ ತಲೆ ಕಚ್ಚಿಕೊಂಡು ಬಂದ ಬೀದಿ ನಾಯಿ: ಬೆಚ್ಚಿಬಿದ್ದ ಹೈದರಾಬಾದ್ ಜನ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.