18 ಶಾಸಕರು ಸೇರಿ 25ಕ್ಕೂ ಹೆಚ್ಚು ಪ್ರಭಾವಿಗಳಿಗೆ ಹನಿಟ್ರ್ಯಾಪ್: ರಾಜಕೀಯ ಬಿರುಗಾಳಿ ಎಬ್ಬಿಸಿದ ಬ್ಲ್ಯಾಕ್‌ಮೇಲರ್​ ದಂಪತಿ

author img

By

Published : Oct 14, 2022, 9:22 PM IST

honey-trapping-and-blackmailing-politicians-and-prominent-people-in-odisha

ಒಡಿಶಾದ ರಾಜ್ಯ ರಾಜಕೀಯದಲ್ಲಿ ಬ್ಲ್ಯಾಕ್‌ಮೇಲರ್​ ದಂಪತಿ ಬಿರುಗಾಳಿಯನ್ನೇ ಎಬ್ಬಿಸಿದ್ದಾರೆ. ಈ ದಂಪತಿ ಬಗ್ಗೆ ಸಿಬಿಐ ಮತ್ತು ಇಡಿ ತನಿಖೆ ಮಾಡಬೇಕೆಂಬ ಒತ್ತಾಯ ಕೇಳಿ ಬರುತ್ತಿದೆ. ಹಾಗಾದರೆ ಯಾರು ಆ ದಂಪತಿ, ಅವರ ದಂಧೆ ಏನು ಎಂಬ ಬಗ್ಗೆ ಫುಲ್​ ಸ್ಟೋರಿ ಇಲ್ಲಿದೆ.

ಭುವನೇಶ್ವರ (ಒಡಿಶಾ): ರಾಜಕೀಯ ಹಾಗೂ ಸಿನಿಮಾ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಆಗಾಗ್ಗೆ ಹನಿಟ್ರ್ಯಾಪ್​ ಪ್ರಕರಣಗಳು ಬೆಳಕಿಗೆ ಬರುತ್ತಲೇ ಇರುತ್ತವೆ. ಆದರೆ, ಒಡಿಶಾದಲ್ಲಿ 18 ಶಾಸಕರು ಸೇರಿ 25ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳನ್ನು ಮಹಿಳೆಯೊಬ್ಬರು ತನ್ನ ಪತಿಯೊಂದಿಗೆ ಸೇರಿಕೊಂಡು ಹನಿಟ್ರ್ಯಾಪ್ ಖೆಡ್ಡಾಕ್ಕೆ ಬೀಳಿಸಿರುವ ಅಚ್ಚರಿಯ ಸಂಗತಿ ಬಯಲಾಗಿದೆ. ಅದರಲ್ಲೂ ಈ ಮಹಿಳೆ ತನ್ನ ಐಷಾರಾಮಿ ಜೀವನಕ್ಕೋಸ್ಕರ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್‌ಮೇಲ್ ಮಾರ್ಗ ಕಂಡುಕೊಂಡಿದ್ದಳು.

28 ವರ್ಷದ ಅರ್ಚನಾ ನಾಗ್ ಎಂಬಾಕೆಯೇ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್‌ಮೇಲ್​ ಸೂತ್ರದಾರಿಯಾಗಿದ್ದು, ಕಳೆದ ವಾರ ಅರ್ಚನಾ ನಾಗ್ ಮತ್ತು ಆಕೆಯ ಪತಿ ಜಗಬಂಧು ಚಂದ್ ಇಬ್ಬರೂ ಭುವನೇಶ್ವರ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಮಹಿಳಾ ಬ್ಲ್ಯಾಕ್‌ಮೇಲರ್ ಬಂಧನವಾದ ದಿನದಿಂದಲೂ ಪ್ರತಿನಿತ್ಯ ಆಘಾತಕಾರಿ ಅಂಶಗಳು ಹೊರಬೀಳುತ್ತಲೇ ಇವೆ.

honey-trapping-and-blackmailing-politicians-and-prominent-people-in-odisha
ಲೇಡಿ ಬ್ಲ್ಯಾಕ್‌ಮೇಲರ್ ಅರ್ಚನಾ ನಾಗ್

ಇತ್ತೀಚಿನ ಬೆಳವಣಿಗೆಯಲ್ಲಿ 18 ಶಾಸಕರು ಸೇರಿದಂತೆ 25ಕ್ಕೂ ಹೆಚ್ಚು ಪ್ರಭಾವಿ ವ್ಯಕ್ತಿಗಳನ್ನು ಅರ್ಚನಾ ನಾಗ್ ಹನಿಟ್ರ್ಯಾಪ್ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಈ ವಿಷಯವು ಒಡಿಶಾದ ರಾಜ್ಯ ರಾಜಕೀಯದಲ್ಲಿ ಬಿರುಗಾಳಿಯನ್ನೇ ಎಬ್ಬಿಸಿದೆ.

ಯಾರು ಈ ಅರ್ಚನಾ ನಾಗ್?: ಒಡಿಶಾದ ಬೋಲಂಗಿರ್‌ ಮೂಲದ ಅರ್ಚನಾ ನಾಗ್ 2015ರಲ್ಲಿ ಭುವನೇಶ್ವರಕ್ಕೆ ಇಂಟಿಗ್ರೇಟೆಡ್ ಲಾ ಕೋರ್ಸ್‌ ಮಾಡಲೆಂದು ಬಂದಿದ್ದಳು. ಆದರೆ, ಈಕೆ ತನ್ನ ಕಾನೂನು ಕೋರ್ಸ್ ಅನ್ನು ಪೂರ್ಣಗೊಳಿಸಿದ್ದಾರೋ ಅಥವಾ ಇಲ್ಲವೋ ಎಂಬುದು ಸ್ಪಷ್ಟವಿಲ್ಲ.

ಆರಂಭದಲ್ಲಿ ಖಾಸಗಿ ಭದ್ರತಾ ಸಂಸ್ಥೆಯಲ್ಲಿ ಕೆಲಸ ಮಾಡಲು ಪ್ರಾರಂಭಿಸಿದ್ದ ಅರ್ಚನಾ ಕೆಲವೇ ತಿಂಗಳಲ್ಲಿ ಆ ಕೆಲಸ ಬಿಟ್ಟು ಬ್ಯೂಟಿ ಸಲೂನ್ ಆರಂಭಿಸಿದ್ದರು. ಈ ನಡುವೆ 2017ರಲ್ಲಿ ಬಾಲಸೋರ್ ಜಿಲ್ಲೆಯ 33 ವರ್ಷದ ಜಗಬಂಧು ಚಂದ್ ಪರಿಚಯವಾಗಿದೆ. ಅರ್ಚನಾ ಹಾಗೂ ಜಗಬಂಧು ಪರಿಚಯವಾದ ಒಂದೇ ವರ್ಷದಲ್ಲಿ ವಿವಾಹ ಕೂಡ ಆಗಿದ್ದಾರೆ. ಅಲ್ಲಿಂದ ಅರ್ಚನಾ ಮತ್ತು ಆಕೆಯ ಪತಿ ಇಬ್ಬರೂ ಸೇರಿಕೊಂಡು ಹನಿಟ್ರ್ಯಾಪ್ ದಂಧೆ ಆರಂಭಿಸಿ, ಹಣ ಸುಲಿಗೆ ಮಾಡತೊಡಗಿದ್ದರು.

honey-trapping-and-blackmailing-politicians-and-prominent-people-in-odisha
ಲೇಡಿ ಬ್ಲ್ಯಾಕ್‌ಮೇಲರ್ ಅರ್ಚನಾ ನಾಗ್

ಯಾರೆಲ್ಲ ಬಿದ್ದಿದ್ದಾರೆ ಹನಿಟ್ರ್ಯಾಪ್​ಗೆ?: ಐಷಾರಾಮಿ ಜೀವನಕ್ಕಾಗಿ ಅರ್ಚನಾ ನಾಗ್ ಹನಿಟ್ರ್ಯಾಪ್ ಹಾಗೂ ಬ್ಲ್ಯಾಕ್‌ಮೇಲ್ ಮಾರ್ಗ ಕಂಡುಕೊಂಡಿದ್ದರು. ಇದಕ್ಕೆ ಪತಿ ಜಗಬಂಧು ಚಂದ್ ಕೂಡ ಸಾಥ್​ ನೀಡಿದ್ದ ಎಂದು ತಿಳಿದುಬಂದಿದೆ. ಚಂದ್ ತನ್ನನ್ನು ಪ್ರಮುಖ ರಾಜಕೀಯ ಪಕ್ಷದ ಸದಸ್ಯ ಎಂದು ಹೇಳಿಕೊಂಡು ಶ್ರೀಮಂತ ಉದ್ಯಮಿಗಳು, ಮಂತ್ರಿಗಳು, ಶಾಸಕರು ಮತ್ತು ಚಲನಚಿತ್ರ ನಿರ್ಮಾಪಕರನ್ನು ಒಳಗೊಂಡು ಅನೇಕ ಪ್ರಭಾವಿ ವ್ಯಕ್ತಿಗಳನ್ನು ಪರಿಚಯಿಸಿಕೊಳ್ಳುತ್ತಿದ್ದ.

ನಂತರ ಪತ್ನಿ ಅರ್ಚನಾ ನಾಗ್ ಹಾಗೂ ಪತಿ ಜಗಬಂಧು ಚಂದ್ ಸೇರಿಕೊಂಡು ತಮ್ಮ ಮನೆಗೆ ಔತಣಕೂಟದ ನೆಪದಲ್ಲಿ ಆಹ್ವಾನಿಸುತ್ತಿದ್ದರು. ಅಲ್ಲದೇ, ಅರ್ಚನಾ ನಾಗ್ ತಾನು ವಕೀಲೆ ಮತ್ತು ಮುಂಚೂಣಿ ರಾಜಕೀಯ ಪಕ್ಷದ ಸದಸ್ಯೆ ಎಂದು ಹೇಳಿಕೊಂಡು ಫೇಸ್‌ಬುಕ್‌ನಲ್ಲಿ ಪ್ರಮುಖ ವ್ಯಕ್ತಿಗಳಿಗೆ ಫ್ರೆಂಡ್ ರಿಕ್ವೆಸ್ಟ್ ಕಳುಹಿಸುತ್ತಿದ್ದರು. ಸೋಷಿಯಲ್ ಮೀಡಿಯಾದಲ್ಲಿ ಸ್ನೇಹ ಬೆಳೆದ ಬಳಿಕ ಅವರನ್ನು ಸಂಪರ್ಕಿಸಿ ತಮ್ಮತ್ತ ಸೆಳೆಯುತ್ತಿದ್ದರು.

ಬಳಿಕ ಅವರನ್ನು ಮನೆಗೆ ಕರೆಸಿಕೊಂಡು ಅನ್ಯೋನ್ಯತೆಯಿಂದ ಇರುವಂತೆ ಮಾಡಿ ಕೊಠಡಿಗೆ ಕರೆದುಕೊಂಡು ಹೋಗುತ್ತಿದ್ದರು. ಆ ಕೊಠಡಿಯಲ್ಲಿ ರಹಸ್ಯ ಕ್ಯಾಮರಾಗಳ ಮೂಲಕ ದೈಹಿಕವಾಗಿ ಅನ್ಯೋನ್ಯತೆಯಾಗಿರುವ ದೃಶ್ಯಗಳನ್ನು ರೆಕಾರ್ಡ್ ಮಾಡುತ್ತಿದ್ದರು. ಹೀಗೆ ಹನಿಟ್ರ್ಯಾಪ್ ಮಾಡಿದ ಬಳಿಕ ಬ್ಲ್ಯಾಕ್‌ಮೇಲ್​ಗೆ ಇಳಿಯುತ್ತಿದ್ದರು. ನಗ್ನ ಫೋಟೋಗಳು ಮತ್ತು ವಿಡಿಯೋಗಳನ್ನು ಇಟ್ಟುಕೊಂಡು ಬೆದರಿಕೆ ಹಾಕುವ ಮೂಲಕ ಹಣ ವಸೂಲಿ ಮಾಡುತ್ತಿದ್ದರು. ಇಷ್ಟೇ ಅಲ್ಲ, ಮಹಿಳೆಯರಿಗೂ ವಂಚಿಸಿ ಈ ದಂಪತಿ ಮೋಸ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಬ್ಲ್ಯಾಕ್‌ಮೇಲರ್​ ದಂಪತಿ ಬಣ್ಣ ಬಯಲಾಗಿದ್ದು ಹೇಗೆ?: ಕೆಲ ದಿನಗಳ ಹಿಂದೆ ಹೆಸರಾಂತ ಚಲನಚಿತ್ರ ನಿರ್ಮಾಪಕರನ್ನು ತಮ್ಮ ಬಲೆಗೆ ಹಾಕಿಕೊಳ್ಳಲು ಮುಂದಾಗ ಈ ಬ್ಲ್ಯಾಕ್‌ಮೇಲರ್​ ದಂಪತಿಯ ಬಣ್ಣ ಬಯಲಾಗಿದೆ. ನಿರ್ಮಾಪಕರ ಬಳಿಗೆ ತಾವೇ ಒಬ್ಬ ಹುಡುಗಿಯನ್ನು ಈ ದಂಪತಿ ಕಳುಹಿಸಿದ್ದರು. ನಂತರ ಆ ಹುಡುಗಿ ಕಾಸ್ಟಿಂಗ್ ಕೌಚ್‌ಗೆ ಬಲಿಯಾಗಿದ್ದಾರೆ ಮತ್ತು ಇದಕ್ಕೆ ನಿರ್ದೇಶಕರೇ ಕಾರಣ ಎಂದು ಬ್ಲ್ಯಾಕ್‌ಮೇಲ್ ಮಾಡಲು ಆರಂಭಿಸಿದ್ದಾರೆ.

ಅಲ್ಲದೇ, ತನ್ನನ್ನು ವಕೀಲೆ ಎಂದು ಗುರುತಿಸಿಕೊಂಡಿದ್ದ ಅರ್ಚನಾ ತನ್ನ ಕಕ್ಷಿದಾರ ಜೊತೆಗೆ ನಿರ್ಮಾಪಕರ ಅಶ್ಲೀಲ ವಿಡಿಯೋಗಳನ್ನು ಹೊಂದಿರುವುದಾಗಿ ಹೇಳಿ ಬ್ಲ್ಯಾಕ್‌ಮೇಲ್ ಮಾಡಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಬಾರದು ಎಂದಾದರೆ 3 ಕೋಟಿ ರೂ. ಕೊಡಬೇಕು. ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ಬೆದರಿಕೆ ಹಾಕಿದ್ದಾರೆ.

honey-trapping-and-blackmailing-politicians-and-prominent-people-in-odisha
ಲೇಡಿ ಬ್ಲ್ಯಾಕ್‌ಮೇಲರ್ ಅರ್ಚನಾ ನಾಗ್

ಆದರೆ, ಇದಕ್ಕೆ ಅನಿರೀಕ್ಷಿತ ತಿರುವು ಸಿಕ್ಕಿದ್ದು, ಈ ಬ್ಲ್ಯಾಕ್‌ಮೇಲ್ ಬಗ್ಗೆ ಚಿತ್ರ ನಿರ್ಮಾಪಕರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ವೇಳೆ ಮತ್ತೊಬ್ಬ ಮಹಿಳೆ ಸಹ ಅರ್ಚನಾ ನಾಗ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ. ಈ ಎರಡು ದೂರುಗಳ ಆಧಾರದ ಮೇಲೆ ಬ್ಲ್ಯಾಕ್‌ಮೇಲರ್​ ಅರ್ಚನಾ ನಾಗ್ ಹಾಗೂ ಪತಿ ಜಗಬಂಧು ಚಂದ್ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸಿಬಿಐ ಮತ್ತು ಇಡಿ ತನಿಖೆ: ಇದೀಗ ಲೇಡಿ ಬ್ಲ್ಯಾಕ್‌ಮೇಲರ್ ಅರ್ಚನಾ ನಾಗ್ ಪ್ರಕರಣವನ್ನು ಜಾರಿ ನಿರ್ದೇಶನಾಲಯದ (ಇಡಿ) ತನಿಖೆಗೆ ಕೋರಿ ಭಾರತೀಯ ವಿಕಾಶ್ ಪರಿಷತ್ ಒರಿಸ್ಸಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಇತ್ತ, ಬಿಜೆಪಿ ಕೂಡ ಸಿಬಿಐ ತನಿಖೆಗೆ ಒತ್ತಾಯಿಸಿದೆ. ಮತ್ತೊಂದೆಡೆ ಅರ್ಚನಾ ನಾಗ್​ ಭುವನೇಶ್ವರದ ಎಸ್​ಡಿಜೆಎಂ ನ್ಯಾಯಾಲಯದಲ್ಲಿ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದಾರೆ.

ಇದನ್ನೂ ಓದಿ: ಒಂದೇ ಒಂದು ಸಲ ಹುಡುಗಿ ಜೊತೆ ಮಾತನಾಡಲು ಬಿಡಿ.. ಪೊಲೀಸ್​ ಠಾಣೆ ಮುಂದೆ ಚಾಕು ಹಿಡಿದು ಯುವಕನ ಹೈಡ್ರಾಮಾ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.