ಇನ್ಮುಂದೆ ಸ್ವಿಗ್ಗಿ,ಜೊಮ್ಯಾಟೊ GST ಪಾವತಿಸಬೇಕು: ಆದ್ರೆ, ಆರ್ಡರ್​ ಮಾಡುವ ಗ್ರಾಹಕರಿಗಿಲ್ಲ ತೊಂದರೆ

author img

By

Published : Sep 17, 2021, 10:10 PM IST

Updated : Sep 17, 2021, 10:50 PM IST

Swiggy

ರೆಸ್ಟೊರೆಂಟ್​​, ಹೋಟೆಲ್​ಗಳಿಂದ ಆಹಾರ ಆರ್ಡರ್​ ಮಾಡಲು ಜನರು ಸಾಮಾನ್ಯವಾಗಿ ಬಳಸುವ ಮೊಬೈಲ್‌ ಆ್ಯಪ್​ಗಳಾದ ಸ್ವಿಗ್ಗಿ, ಜೊಮ್ಯಾಟೋ ಇನ್ಮುಂದೆ ಜಿಎಸ್​​ಟಿ ಪಾವತಿಸಬೇಕಿದೆ.

ನವದೆಹಲಿ: ಆಹಾರ ವಿತರಣಾ ಆ್ಯಪ್​ಗಳಾದ ಜೊಮ್ಯಾಟೊ ಮತ್ತು ಸ್ವಿಗ್ಗಿ ಇನ್ಮುಂದೆ ಜಿಎಸ್​​ಟಿ (ಸರಕು ಮತ್ತು ಸೇವಾ ತೆರಿಗೆ) ಪಾವತಿ ಮಾಡಬೇಕು ಎಂದು ವಿತ್ತ ಸಚಿವೆ ನಿರ್ಮಲಾ ಸೀತರಾಮನ್‌ ತಿಳಿಸಿದರು. 45ನೇ ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಮಂಡಳಿ​ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಅವರು ಮಾತನಾಡಿದರು.

ಇಷ್ಟು ದಿನ ಆಹಾರ ಪದಾರ್ಥಗಳ ಆದೇಶ(Order) ಪಡೆದುಕೊಳ್ಳುತ್ತಿದ್ದ ರೆಸ್ಟೋರೆಂಟ್​​ಗಳು ಜಿಎಸ್​​ಟಿ ಸಂದಾಯ ಮಾಡುತ್ತಿದ್ದವು. ಆದರೆ ಇನ್ಮುಂದೆ ಆಹಾರ ವಿತರಣಾ ಆ್ಯಪ್​ಗಳೇ ಈ ಹಣ ಸಂದಾಯ ಮಾಡಲಿವೆ ಎಂದು ಅವರು ತಿಳಿಸಿದ್ದಾರೆ.

ಆಹಾರ ವಿತರಣಾ ಮೊಬೈಲ್ ಅಪ್ಲಿಕೇಶನ್​ಗಳು ಮತ್ತು ಹರಿಯಾಣದ ಕೆಲವೊಂದು ರೆಸ್ಟೋರೆಂಟ್​​ಗಳು ವಾರ್ಷಿಕ ತೆರಿಗೆ ಲೆಕ್ಕಪತ್ರ ಅಥವಾ ತೆರಿಗೆ ರಿಟರ್ನ್ಸ್‌ ಸಲ್ಲಿಸಿದ ನಂತರ ಗಣನೀಯ ಪ್ರಮಾಣದಲ್ಲಿ ತೆರಿಗೆ ವಂಚನೆ ಮಾಡಿರುವುದು ಕಂಡು ಬಂದಿದೆ ಎಂದು ಹಣಕಾಸು ಸಚಿವಾಲಯ ತಿಳಿಸಿದೆ. ಹೀಗಾಗಿ ಪ್ರಸ್ತುತ ಆ್ಯಪ್​​ಗಳನ್ನು ಜಿಎಸ್​​ಟಿ ತೆರಿಗೆಗೆ ನೋಂದಾಯಿಸಲಾಗಿದೆ ಎಂದರು.

ಇದೇ ವೇಳೆ ಮಾತನಾಡಿದ ಕಂದಾಯ ಕಾರ್ಯದರ್ಶಿ ತರುಣ್​ ಬಜಾಜ್​, ಇವುಗಳ ಮೇಲೆ ಯಾವುದೇ ಹೊಸ ತೆರಿಗೆ ಘೋಷಣೆ ಮಾಡಿಲ್ಲ. ಆದರೆ ರೆಸ್ಟೋರೆಂಟ್​​ ನೀಡುವ ಜಿಎಸ್​ಟಿಯನ್ನು ಕಟ್ಟಲಿವೆ ಎಂದರು.

ಇದನ್ನೂ ಓದಿ: ಆನ್‌ಲೈನ್‌ನಲ್ಲಿ ಆಹಾರ ತರಿಸಿಕೊಳ್ಳುವವರಿಗೆ ಕಹಿ ಸುದ್ದಿ ; ಶೀಘ್ರದಲ್ಲೇ ಈ ಸೇವೆಯೂ ಜಿಎಸ್‌ಟಿ ವ್ಯಾಪ್ತಿಗೆ!

ಗ್ರಾಹಕರಿಗಿಲ್ಲವೇ ತೊಂದರೆ? ಈ ಉದಾಹರಣೆ ಗಮನಿಸಿ..

ನಾವು ಆ್ಯಪ್​ಗಳ ಮೂಲಕ ಆಹಾರ ಆರ್ಡರ್ ಮಾಡುತ್ತೇವೆ ಎಂದು ಭಾವಿಸೋಣ. ಇಷ್ಟು ದಿನ ರೆಸ್ಟೋರೆಂಟ್​ ತೆರಿಗೆ ಪಾವತಿ ಮಾಡುತ್ತಿತ್ತು. ಆದರೆ ಕೆಲವೊಂದು ರೆಸ್ಟೋರೆಂಟ್​ಗಳು ಈ ಹಣ ಪಾವತಿ ಮಾಡದೇ ಇರುವುದು ಹಣಕಾಸು ಇಲಾಖೆ ಗಮನಕ್ಕೆ ಬಂದಿದೆ. ಹೀಗಾಗಿ ನಾವು ಆರ್ಡರ್ ಮಾಡುವ ಆಹಾರದ ಮೇಲೆ ಇನ್ಮುಂದೆ ಆ್ಯಪ್​ಗಳೇ ಜಿಎಸ್​ಟಿ ಕಟ್ಟಲಿವೆ ಎಂದು ಉದಾಹರಣೆ ಕೊಟ್ಟು ವಿವರಿಸಿದರು.

ರೆಸ್ಟೋರೆಂಟ್‌ ಸೇವೆಯ ಅಡಿಯಲ್ಲಿ ಬರುವ ಕ್ಲೌಡ್ ಕಿಚನ್‌ಗಳು/ಸೆಂಟ್ರಲ್ ಕಿಚನ್‌ಗಳಿಂದ ಆಹಾರ, ಡೋರ್ ಡೆಲಿವರಿ ಹಾಗೂ ಇಲ್ಲಿಂದ ತೆಗೆದುಕೊಂಡು ಹೋಗುವ ಸೇವೆಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರಬೇಕು ಎಂದು ಸಮಿತಿ ಪ್ರಸ್ತಾಪ ಮಾಡಿತ್ತು.

Last Updated :Sep 17, 2021, 10:50 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.