ಕೋವಿಡ್​​​ ಔಷಧಿಗಳ ಮೇಲೆ ವಿನಾಯಿತಿ; ಪೆಟ್ರೋಲ್​- ಡೀಸೆಲ್​ GST ವ್ಯಾಪ್ತಿಗಿಲ್ಲ: ನಿರ್ಮಲಾ ಸೀತಾರಾಮನ್​

author img

By

Published : Sep 17, 2021, 8:48 PM IST

Sitharaman

ಸದ್ಯಕ್ಕೆ ಪೆಟ್ರೋಲ್​ ಮತ್ತು ಡೀಸೆಲ್ ಅನ್ನು​​ ಜಿಎಸ್​​ಟಿ ವ್ಯಾಪ್ತಿಗೆ ಸೇರಿಸಲು ಸಾಧ್ಯವಾಗದು ಎಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್​​​ ಸ್ಪಷ್ಟಪಡಿಸಿದರು.

ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ನೇತೃತ್ವದಲ್ಲಿ ಇಂದು ನಡೆದ 45ನೇ ಜಿಎಸ್​ಟಿ (ಸರಕು ಮತ್ತು ಸೇವಾ ತೆರಿಗೆ) ಕೌನ್ಸಿಲ್​ ಸಭೆಯಲ್ಲಿ ಕೆಲವು ಮಹತ್ವದ ನಿರ್ಧಾರಗಳನ್ನು ಕೈಗೊಳ್ಳಲಾಗಿದೆ. ಪ್ರಮುಖವಾಗಿ ತೈಲೋತ್ಪನ್ನವನ್ನು ಜಿಎಸ್​​ಟಿ ವ್ಯಾಪ್ತಿಗೆ ತರುವ ಯಾವುದೇ ನಿರ್ಧಾರ ಕೈಗೊಂಡಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಉತ್ತರ ಪ್ರದೇಶದ ಲಖನೌದಲ್ಲಿ ನಡೆದ ಮಹತ್ವದ ಸಭೆಯ ನಂತರ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ನಿರ್ಮಲಾ ಸೀತಾರಾಮನ್​ ಮಾತನಾಡಿದರು.​

ಪೆಟ್ರೋಲ್​- ಡೀಸೆಲ್​ GST ವ್ಯಾಪ್ತಿಗಿಲ್ಲ: ನಿರ್ಮಲಾ ಸೀತಾರಾಮನ್​

ಪ್ರಮುಖಾಂಶಗಳು:

1. ಗುತ್ತಿಗೆ ಆಧಾರದಲ್ಲಿ ಆಮದು ಮಾಡಿಕೊಳ್ಳುವ ವಿಮಾನಗಳಿಗೆ ಎರಡು ಬಾರಿ ನೀಡಬೇಕಾದ ತೆರಿಗೆಯಿಂದ ವಿನಾಯತಿ ನೀಡಲಾಗಿದೆ.

2. ಕೆಲವು ಪರಿಣಾಮಕಾರಿ ಜೀವರಕ್ಷಕ ಔಷಧಿಗಳ ಮೇಲಿನ ಜಿಎಸ್​ಟಿಗೆ ವಿನಾಯತಿ ನೀಡಲಾಗಿದೆ.

3. ಕೋವಿಡ್​ ಔಷಧಿಗಳ ಮೇಲಿನ ಜಿಎಸ್​ಟಿ ದರಗಳನ್ನು ಸೆಪ್ಟೆಂಬರ್​​ 30ರಿಂದ ಡಿಸೆಂಬರ್​​ 31ರವರೆಗೆ ವಿಸ್ತರಣೆ ಮಾಡಲು ನಿರ್ಧಾರ ಕೈಗೊಳ್ಳಲಾಗಿದೆ.

4. ಪ್ರಮುಖವಾಗಿ Zolgensma & Viltepso ಔಷಧಿಗಳ ಬೆಲೆ 16 ಕೋಟಿ ರೂ ಆಗಿದ್ದು, ಇವುಗಳ ಮೇಲಿನ ಜಿಎಸ್​​ಟಿ ವಿನಾಯಿತಿ ನೀಡಲಾಗಿದೆ.

5. ಕೋವಿಡ್​ ಚಿಕಿತ್ಸೆಗೆ ಬಳಕೆ ಮಾಡುವ ಔಷಧಿಗಳ ಮೇಲಿನ ರಿಯಾಯತಿ ದರವನ್ನು ಡಿಸೆಂಬರ್​ 31ರವರೆಗೆ ವಿಸ್ತರಣೆ ಮಾಡಲಾಗಿದೆ.

6. ಬಯೋ ಡೀಸೆಲ್​ ಮೇಲಿನ ಜಿಎಸ್​​ಟಿ ದರವನ್ನು ಶೇ. 12ರಿಂದ ಶೇ 5ಕ್ಕೆ ಇಳಿಸಲಾಗಿದೆ.

ಜಿಎಸ್​​ಟಿ ವ್ಯಾಪ್ತಿಗಿಲ್ಲ ಪೆಟ್ರೋಲ್​, ಡೀಸೆಲ್:​

ಇದೇ ವೇಳೆ ಮಾತನಾಡಿರುವ ನಿರ್ಮಲಾ ಸೀತಾರಾಮನ್​, ಪೆಟ್ರೋಲ್​, ಡೀಸೆಲ್​​ ಜಿಎಸ್​​ಟಿ ವ್ಯಾಪ್ತಿಗೆ ತರುವ ವಿಚಾರವಾಗಿ ಇಂದಿನ ಕೌನ್ಸಿಲ್ ಸಭೆಯಲ್ಲಿ ಸುದೀರ್ಘವಾದ ಚರ್ಚೆಯಾಗಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಅದು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಕೌನ್ಸಿಲ್​ ಸಭೆಯಲ್ಲಿನ ಎಲ್ಲ ಸದಸ್ಯರು ಇದೇ ರೀತಿಯ ಅಭಿಮತ ವ್ಯಕ್ತಪಡಿಸಿದ್ದಾರೆಂದು ಅವರು ತಿಳಿಸಿದರು.

ಕೇರಳ ಹೈಕೋರ್ಟ್​ ಆದೇಶದ ನಂತರ ಸರಕು ಮತ್ತು ಸೇವಾ ತೆರಿಗೆ ವ್ಯಾಪ್ತಿಗೆ ಪೆಟ್ರೋಲ್​, ಡೀಸೆಲ್​ ಅನ್ನು ತರಬೇಕು ಎಂಬ ಮಾತು ಕೇಳಿ ಬಂದಿತ್ತು. ಕೋರ್ಟ್​​​ ನಿರ್ದೇಶನದಂತೆ ಕೌನ್ಸಿಲ್​ ಸಭೆಯಲ್ಲಿ ಅದರ ಬಗ್ಗೆ ಚರ್ಚೆ ನಡೆಸಲಾಗಿದ್ದು, ಕೌನ್ಸಿಲ್​​ ಸದಸ್ಯರು ಅದನ್ನು ಜಿಎಸ್​​ಟಿ ವ್ಯಾಪ್ತಿಯೊಳಗೆ ಸೇರಿಸುವ ಬಯಕೆ ವ್ಯಕ್ತಪಡಿಸಿಲ್ಲ ಎಂದರು. ಇದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್​ಗೆ ವರದಿ ಮಾಡಲಾಗುವುದು ಎಂದು ತಿಳಿಸಿದರು.

ಜೂನ್​ ತಿಂಗಳಲ್ಲಿ ಈ ಕುರಿತ ಅರ್ಜಿ ವಿಚಾರಣೆ ನಡೆಸಿದ ಕೇರಳ ಹೈಕೋರ್ಟ್​, ಜಿಎಸ್​​ಟಿ ವ್ಯಾಪ್ತಿಗೆ ಪೆಟ್ರೋಲ್​ ಹಾಗು ಡೀಸೆಲ್​ ತರುವ ಬಗ್ಗೆ ನಿರ್ಧಾರ ತೆಗೆದುಕೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸೂಚನೆ ನೀಡಿತ್ತು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.