ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಲು ಭಗತ್ ಸಿಂಗ್ ಕೋಶ್ಯಾರಿ ನಿರ್ಧಾರ

ಮಹಾರಾಷ್ಟ್ರ ರಾಜ್ಯಪಾಲ ಹುದ್ದೆಗೆ ರಾಜೀನಾಮೆ ನೀಡಲು ಭಗತ್ ಸಿಂಗ್ ಕೋಶ್ಯಾರಿ ನಿರ್ಧಾರ
ರಾಜ್ಯಪಾಲ ಹುದ್ದೆಗೆ ರಾಜೀನಾಮೆಗೆ ನಿರ್ಧಾರ - ಮಹಾರಾಷ್ಟ್ರ ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ - ಪ್ರಧಾನಿ ಮೋದಿ ಬಳಿಕ ರಾಜ್ಯಪಾಲ ಕೋಶ್ಯಾರಿ ಮನ ವಿ- ರಾಜ್ಯಪಾಲ ಹೊಣೆಯಿಂದ ತಪ್ಪಿಸಲು ಕೋರಿಕೆ
ಮುಂಬೈ(ಮಹಾರಾಷ್ಟ್ರ): ಶಿವಸೇನೆ, ಎನ್‌ಸಿಪಿ, ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಸರ್ಕಾರದ ವೇಳೆ ಸುದ್ದಿಯಾಗಿದ್ದ, ಶಿವಾಜಿ ಮಹಾರಾಜರ ಬಗ್ಗೆ ಹೇಳಿಕೆ ನೀಡಿ ಟೀಕೆಗೆ ಗುರಿಯಾಗಿರುವ ಮಹಾರಾಷ್ಟ್ರ ರಾಜ್ಯಪಾಲ ಭಗತ್ಸಿಂಗ್ ಕೋಶ್ಯಾರಿ ಅವರು ತಮ್ಮ ಹುದ್ದೆಯಿಂದ ನಿರ್ಗಮಿಸಲು ಇಚ್ಚಿಸಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಬಳಿ ಈ ಬಗ್ಗೆ ಅರಿಕೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ರಾಜಭವನ ಹೊರಡಿಸಿದ ಹೇಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಲಾಗಿದ್ದು, ಭಗತ್ಸಿಂಗ್ ಕೋಶ್ಯಾರಿ ಅವರು ರಾಜ್ಯಪಾಲ ಹುದ್ದೆಯಿಂದ ಕೆಳಗಿಳಿಯಲು ಇಚ್ಚಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಭೇಟಿ ನೀಡಿದಾಗ ತಮ್ಮ ನಿರ್ಧಾರವನ್ನು ತಿಳಿಸಿದ್ದರು. ರಾಜಕೀಯ ಜವಾಬ್ದಾರಿಯಿಂದ ತಮ್ಮನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದರು ಎಂದು ತಿಳಿಸಿದೆ. ರಾಜ್ಯಪಾಲ ಕೋಶ್ಯಾರಿ ಅವರು ತಮ್ಮ ಉಳಿದ ಜೀವನವನ್ನು ಓದು, ಬರವಣಿಗೆ ಮತ್ತು ಇತರ ಚಟುವಟಿಕೆಗಳಲ್ಲಿ ಕಳೆಯುವ ಬಯಕೆಯನ್ನು ಹೊಂದಿದ್ದಾರೆ. ಹೀಗಾಗಿ ಅವರು ಪ್ರಸ್ತುತ ಹೊಣೆಗಾರಿಕೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾಗಿ ರಾಜಭವನದ ಪತ್ರಿಕಾ ಪ್ರಕಟಣೆ ತಿಳಿಸಿದೆ.
ಶಿವಾಜಿ ಮಹಾರಾಜ್ರ ಬಗ್ಗೆ ವಿವಾದಿತ ಹೇಳಿಕೆ: ರಾಜ್ಯಪಾಲ ಭಗತ್ ಸಿಂಗ್ ಕೋಶ್ಯಾರಿ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಬಗ್ಗೆ ಪ್ರಸ್ತಾಪಿಸಿದ್ದರು. ಈ ಸಂದರ್ಭದಲ್ಲಿ ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಮತ್ತು ಕೇಂದ್ರ ಸಚಿವ ನಿತಿನ್ ಗಡ್ಕರಿ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಗಡ್ಕರಿ ಮತ್ತು ಪವಾರ್ ಅವರನ್ನು ಹೊಗಳುತ್ತಲೇ ರಾಜ್ಯಪಾಲರು ಶಿವಾಜಿ ಮಹಾರಾಜರ ಬಗ್ಗೆ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಈ ಹಿಂದೆ ನಮಗೆ ಆದರ್ಶಪ್ರಾಯರು ಎಂದರೆ ಜವಾಹರ್ಲಾಲ್ ನೆಹರು, ಸುಭಾಷ್ಚಂದ್ರ ಬೋಸ್, ಮಹಾತ್ಮ ಗಾಂಧಿ ಎಂಬ ಹೆಸರುಗಳು ಬರುತ್ತಿದ್ದವು. ಮಹಾರಾಷ್ಟ್ರದಲ್ಲಿ ನೀವು ಎಲ್ಲಿಯೂ ನೋಡಬೇಕಾದ ಅಗತ್ಯವಿಲ್ಲ. ಎಲ್ಲ ಕಡೆಯೂ ಅನೇಕ ಐಕಾನ್ಗಳಿದ್ದಾರೆ. ಛತ್ರಪರಿ ಶಿವಾಜಿ ಮಹಾರಾಜರು ಗತಕಾಲದ ಐಕಾನ್ ಆಗಿದ್ದಾರೆ. ಈಗ ನಿತಿನ್ ಗಡ್ಕರಿ ಮತ್ತು ಶರದ್ ಪವಾರ್ ಅವರು ಇಂದಿನ ರೋಲ್ ಮಾಡೆಲ್ಗಳಾಗಿದ್ದಾರೆ ಎಂದು ಹೇಳಿಕೆ ನೀಡಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ಓದಿ: ಶಿವಾಜಿ ಕುರಿತ ಮಹಾರಾಷ್ಟ್ರ ರಾಜ್ಯಪಾಲ ಕೊಶ್ಯಾರಿ ಹೇಳಿಕೆಗೆ ಎನ್‌ಸಿಪಿ ವಿರೋಧ
ಇದು ಮರಾಠಿಗರ ಅಸ್ಮಿತೆಯನ್ನು ಪ್ರಶ್ನಿಸಿದಂತೆ ಎಂದು ಮಹಾರಾಷ್ಟ್ರದಲ್ಲಿ ಪ್ರತಿಭಟನೆಗೆ ಕಾರಣವಾಗಿತ್ತು. ಹೇಳಿಕೆಗೆ ಕ್ಷಮೆ ಕೋರಬೇಕು ಅಲ್ಲದೇ, ಅವರನ್ನು ರಾಜ್ಯಪಾಲ ಹುದ್ದೆಯಿಂದ ವಜಾ ಮಾಡಬೇಕು ಎಂಬ ಕೂಗು ಕೇಳಿಬಂದಿತ್ತು.
ಗುಜರಾತಿಗಳ ಬೆಂಬಲಿಸಿದ್ದ ಕೋಶ್ಯಾರಿ: ಇನ್ನು, ಮಹಾರಾಷ್ಟ್ರದಿಂದ ಗುಜರಾತಿಗಳು ಮತ್ತು ರಾಜಸ್ಥಾನಿಗಳನ್ನು ಹೊರಗೆ ಹಾಕಿದರೆ, ರಾಜ್ಯದಲ್ಲಿ ಹಣವೇ ಇರುವುದಿಲ್ಲ. ದೇಶದ ಹಣಕಾಸು ರಾಜಧಾನಿಯ ಅಂತ್ಯವಾಗಲಿದೆ ಎಂದು ಮತ್ತೊಂದು ವಿವಾದಿತ ಹೇಳಿಕೆ ನೀಡಿದ್ದರು. ಮುಂಬೈ, ಥಾಣೆಯಿಂದ ಅವರನ್ನು ಹೊರದಬ್ಬಿದರೆ, ಹಣಕಾಸು ರಾಜಧಾನಿ ಎಂದು ಕರೆಸಿಕೊಳ್ಳು ಮಹಾರಾಷ್ಟ್ರ ಬಡವಾಗಲಿದೆ. ಅವರ ವ್ಯವಹಾರಗಳಿಂದಲೇ ಹಣದ ಹರಿವು ಇಲ್ಲಿ ಹೆಚ್ಚಿದೆ ಎಂದು ಹೇಳಿಕೆ ನೀಡಿದ್ದರು. ಇದಕ್ಕೂ ರಾಜ್ಯದಲ್ಲಿ ತೀವ್ರ ವಿರೋಧ ಕೇಳಿಬಂದಿತ್ತು.
ಓದಿ: ವಿವಾದಾತ್ಮಕ ಹೇಳಿಕೆ: ಮಹಾರಾಷ್ಟ್ರ ರಾಜ್ಯಪಾಲ ಕೋಶ್ಯಾರಿ ಪದಚ್ಯುತಿಗೆ ಒತ್ತಾಯ
