ಮಕ್ಕಳ ಕಳ್ಳರೆಂದು ಶಂಕಿಸಿ ಸಾಧುಗಳ ಮೇಲೆ ಹಲ್ಲೆ.. ಗ್ರಾಮಸ್ಥರ ಕ್ರಮಕ್ಕೆ ಖಂಡನೆ - ವಿಡಿಯೋ

author img

By

Published : Sep 14, 2022, 9:50 AM IST

four Sadhus Assaulted

ಉತ್ತರ ಪ್ರದೇಶದಿಂದ ಪಂಢರಪುರಕ್ಕೆ ತೆರಳುತ್ತಿದ್ದ ನಾಲ್ವರು ಸಾಧುಗಳ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

ಸಾಂಗ್ಲಿ(ಮಹಾರಾಷ್ಟ್ರ): ಮಕ್ಕಳ ಕಳ್ಳರೆಂದು ಶಂಕೆ ವ್ಯಕ್ತಪಡಿಸಿ, ನಾಲ್ವರು ಸಾಧುಗಳ ಮೇಲೆ ಗ್ರಾಮಸ್ಥರು ಹಲ್ಲೆ ನಡೆಸಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿಯಲ್ಲಿ ನಡೆದಿದೆ. ನಾಲ್ವರ ಮೇಲೆ ಅಮಾನವೀಯ ರೀತಿಯಲ್ಲಿ ಥಳಿಸುತ್ತಿರುವ ವಿಡಿಯೋ ಸದ್ಯ ಸಿಕ್ಕಾಪಟ್ಟೆ ವೈರಲ್​ ಆಗ್ತಿದೆ. ಅಮಾನುಷವಾಗಿ ಥಳಿತಕ್ಕೊಳಗಾಗಿರುವ ಸಾಧುಗಳು ಉತ್ತರ ಪ್ರದೇಶದವರು ಎಂದು ತಿಳಿದು ಬಂದಿದ್ದು, ಇವರೆಲ್ಲರೂ ಕರ್ನಾಟಕದ ಮೂಲಕ ಪಂಢರಪುರಕ್ಕೆ ಹೋಗುತ್ತಿದ್ದರು ಎಂದು ವರದಿಯಾಗಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಲವಣ ಎಂಬ ಹಳ್ಳಿಯಲ್ಲಿ ಈ ಘಟನೆ ನಡೆದಿದ್ದು, ನೂರಾರು ಜನರ ಸಮ್ಮುಖದಲ್ಲಿ ಕಿರಾಣಿ ಅಂಗಡಿವೊಂದರ ಮುಂದೆ ಕೋಲುಗಳಿಂದ ಥಳಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಪ್ರಕರಣ ದಾಖಲಾಗಿಲ್ಲ ಎಂದು ಸಾಂಗ್ಲಿ ಎಸ್​ಪಿ ದೀಕ್ಷಿತ್ ಗೆಡಮ್​ ತಿಳಿಸಿದ್ದು, ವೈರಲ್​ ವಿಡಿಯೋ ಆಧಾರದ ಮೇಲೆ ಪ್ರಕರಣದ ಪರಿಶೀಲನೆ ನಡೆಸಲಾಗ್ತಿದೆ ಎಂದಿದ್ದಾರೆ. ನಾಲ್ವರು ಸಾಧುಗಳ ಬಳಿ ಆಧಾರ್ ಕಾರ್ಡ್​​ ಇದ್ದು, ಸಂಬಂಧಿಕರ ಮೊಬೈಲ್ ನಂಬರ್ ಸಹ ನೀಡಿದ್ದಾರೆ. ಇವರೆಲ್ಲರೂ ಉತ್ತರ ಪ್ರದೇಶದ ಮಥುರಾದಲ್ಲಿ ವಾಸವಾಗಿರುವುದಾಗಿ ಮಾಹಿತಿ ನೀಡಿದ್ದಾರೆ.

ಮಕ್ಕಳ ಕಳ್ಳರೆಂದು ಶಂಕಿಸಿ ನಾಲ್ವರು ಸಾಧುಗಳ ಮೇಲೆ ಹಲ್ಲೆ ನಡೆಸಿದ ಗ್ರಾಮಸ್ಥರು

ಇದನ್ನೂ ಓದಿ: ಶಂಕಿತ ಮಕ್ಕಳ ಅಪಹರಣಕಾರನ ಥಳಿಸಿ ಕೊಂದ ಗ್ರಾಮಸ್ಥರು-ವಿಡಿಯೋ

ಸಾಧುಗಳ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ಶಾಸಕ ರಾಮ್​​ ಕದಂ, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ. ಸಾಧುಗಳ ಮೇಲೆ ಇಂತಹ ಅಮಾನವೀಯ ಕೃತ್ಯ ಸಹಿಸುವುದಿಲ್ಲ ಎಂದಿದ್ದು, ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

2020ರಲ್ಲಿ ಪಾಲ್ಘರ್​​ನಲ್ಲಿ ನಡೆದ ಸಾಧುಗಳ ಸರಣಿ ಹತ್ಯೆ ಪ್ರಕರಣದಲ್ಲಿ ಅಂದಿನ ಸಿಎಂ ಉದ್ಧವ್ ಠಾಕ್ರೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಆದರೆ, ಪ್ರಸ್ತುತ ಸರ್ಕಾರ ಇಂತಹ ಅನ್ಯಾಯ ಹಾಗೂ ಹಲ್ಲೆ ಸಹಿಸುವುದಿಲ್ಲ ಎಂದಿದ್ದಾರೆ. ಕಳೆದ ಕೆಲ ದಿನಗಳಿಂದ ಉತ್ತರ ಕರ್ನಾಟಕ ಸೇರಿದಂತೆ ಮಹಾರಾಷ್ಟ್ರದ ಕೆಲವೊಂದು ಪ್ರದೇಶಗಳಲ್ಲಿ ಮಕ್ಕಳ ಕಳ್ಳರು ಓಡಾಡುತ್ತಿದ್ದಾರೆಂಬ ವದಂತಿಗಳು ಹರಿದಾಡುತ್ತಿವೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.