ವಿದ್ಯುತ್ ಸ್ಪರ್ಶದಿಂದ ಒಬ್ಬರನ್ನ ಉಳಿಸಲು ಹೋಗಿ ನಾಲ್ವರು ಮಕ್ಕಳ ಸಾವು: ವಿಷ ಸೇವಿಸಿದ ತಂದೆ

ವಿದ್ಯುತ್ ಸ್ಪರ್ಶದಿಂದ ಒಬ್ಬರನ್ನ ಉಳಿಸಲು ಹೋಗಿ ನಾಲ್ವರು ಮಕ್ಕಳ ಸಾವು: ವಿಷ ಸೇವಿಸಿದ ತಂದೆ
Four Minor Siblings Electrocuted in Unnao: ವಿದ್ಯುತ್ ಸ್ಪರ್ಶದಿಂದ ನಾಲ್ವರು ಮಕ್ಕಳು ಸಾವನ್ನಪ್ಪಿರುವ ಘಟನೆಯಿಂದ ನೊಂದ ತಂದೆ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ವರದಿಯಾಗಿದೆ.
ಉನ್ನಾವೋ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯಲ್ಲಿ ದಾರುಣ ಘಟನೆಯೊಂದು ವರದಿಯಾಗಿದೆ. ವಿದ್ಯುತ್ ಅವಘಡದಲ್ಲಿ ಒಬ್ಬರ ರಕ್ಷಣೆ ಮಾಡಲು ಹೋದ ಮೂವರು ಸೇರಿ ಒಟ್ಟು ನಾಲ್ವರು ಪುಟ್ಟ ಮಕ್ಕಳು ಪ್ರಾಣ ಕಳೆದುಕೊಂಡಿದ್ದಾರೆ. ಈ ಘಟನೆಯಿಂದ ಮನನೊಂದ ತಂದೆ ಕೀಟನಾಶಕ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಆತನನ್ನು ಕೂಡಲೇ ಕುಟುಂಬಸ್ಥರು ಆಸ್ಪತ್ರೆಗೆ ಸೇರಿದ್ದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಇಲ್ಲಿನ ಬಾರ್ಸ್ಗವಾರ್ ಪೊಲೀಸ್ ಠಾಣಾ ವ್ಯಾಪ್ತಿಯ ಲಾಲ್ಮನ್ ಖೇಡಾ ಗ್ರಾಮದಲ್ಲಿ ಭಾನುವಾರ ಸಂಜೆ ಈ ದುರ್ಘಟನೆ ಸಂಭವಿಸಿದೆ. ವೀರೇಂದ್ರ ಕುಮಾರ್ ಎಂಬುವರ ಮಕ್ಕಳಾದ 9 ವರ್ಷದ ಮಗ, 8 ವರ್ಷದ ಮಗಳು, 6 ವರ್ಷದ ಮಗ ಹಾಗೂ 4 ವರ್ಷದ ಮಗಳು ಮೃತರು ಎಂದು ಗುರುತಿಸಲಾಗಿದೆ. ಮಕ್ಕಳ ಸಾವಿನಿಂದ ಕುಗ್ಗಿ ಹೋದ ವೀರೇಂದ್ರ ಇಂದು ಬೆಳಗ್ಗೆ ಮನೆಯಲ್ಲಿಟ್ಟಿದ್ದ ಕ್ರಿಮಿನಾಶಕ ಸೇವಿಸಿದ್ದಾರೆ. ಇದರಿಂದ ಆರೋಗ್ಯ ಹದಗೆಟ್ಟಿದ್ದು, ವಾಂತಿ ಮಾಡಿಕೊಳ್ಳಲು ಆರಂಭಿಸಿದೆ. ಇದನ್ನು ಕಂಡ ಕುಟುಂಬಸ್ಥರು ಗಾಬರಿಯಿಂದ ಅವರನ್ನು ಉನ್ನಾವೋ ಜಿಲ್ಲಾಸ್ಪತ್ರೆಗೆ ರವಾನಿಸಿದ್ದಾರೆ. ಚಿಕಿತ್ಸೆ ನಂತರ ವೀರೇಂದ್ರ ಚೇತರಿಸಿಕೊಂಡಿದ್ದಾರೆ.
ನಡೆದಿದ್ದೇನು?: ವೀರೇಂದ್ರ ಅವರ ಮನೆಯಲ್ಲಿ ಹಳೆಯ ಟೇಬಲ್ ಫ್ಯಾನ್ ಇದೆ. ಭಾನುವಾರ ಸಂಜೆ ಫ್ಯಾನ್ ಬಳಿಯೇ ನಾಲ್ವರು ಮಕ್ಕಳು ಕೂಡ ಆಟವಾಡುತ್ತಿದ್ದರು. ಈ ಸಂದರ್ಭದಲ್ಲಿ ಒಂದು ಮಗು ಫ್ಯಾನ್ ಅನ್ನು ಆಕಸ್ಮಿಕವಾಗಿ ಮುಟ್ಟಿದೆ. ಇದರಿಂದ ಫ್ಯಾನ್ನಿಂದ ವಿದ್ಯುತ್ ಪ್ರವಹಿಸಿ ಆ ಮಗು ಕೂಗಲು ಆರಂಭಿಸಿದೆ. ಇದರಿಂದ ಉಳಿದ ಸಹೋದರರು ಮತ್ತು ಸಹೋದರಿಯರು ಮಗುವನ್ನು ರಕ್ಷಣೆಗೆ ಧಾವಿಸಿದ್ದಾರೆ. ಈ ವೇಳೆ ಈ ಮೂವರಿಗೂ ವಿದ್ಯುತ್ ಸ್ಪರ್ಶಿಸಿದೆ. ಪರಿಣಾಮವಾಗಿ ನಾಲ್ವರು ಮಕ್ಕಳು ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ.
ಈ ಘಟನೆ ವೇಳೆ ಮನೆಯಲ್ಲಿ ಮಕ್ಕಳು ಹೊರತು ಪಡಿಸಿ ಯಾರೂ ಇರಲಿಲ್ಲ. ಹೀಗಾಗಿ ಬಹಳ ಹೊತ್ತಿನವರೆಗೂ ಮಕ್ಕಳು ಸಾವನ್ನಪ್ಪಿರುವ ವಿಚಾರ ಕುಟುಂಬಸ್ಥರಿಗೆ ಗೊತ್ತಾಗಿಲ್ಲ. ಮನೆಗೆ ಮರಳಿದ ಬಳಿಕ ದುರಂತ ಬೆಳಕಿಗೆ ಬಂದಿದೆ. ಮತ್ತೊಂದೆಡೆ, ಘಟನೆಯ ಮಾಹಿತಿ ಪಡೆದ ತಕ್ಷಣ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದಾರೆ. ನಾಲ್ವರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿದ್ದಾರೆ. ಮರಣೋತ್ತರ ಪರೀಕ್ಷೆ ವರದಿಯಲ್ಲಿ ಮಕ್ಕಳ ಸಾವಿಗೆ ವಿದ್ಯುತ್ ಪ್ರವಾಹವೇ ಕಾರಣ ಎಂದು ದೃಢಪಟ್ಟಿದೆ. ಇಂದು, ಮಂಗಳವಾರ ಬೆಳಗ್ಗೆ ಮಕ್ಕಳ ತಂದೆ ವೀರೇಂದ್ರ ಕುಮಾರ್ ಮನೆಯಲ್ಲಿಟ್ಟಿದ್ದ ಕ್ರಿಮಿನಾಶಕ ಸೇವಿಸಿದ್ದಾರೆ. ಅದೃಷ್ಟವಶಾತ್ ಎಂಬಂತೆ ಅವರು ಬದುಕುಳಿದಿದ್ದಾರೆ.
