ಗರ್ಭಕಂಠದ ಕ್ಯಾನ್ಸರ್: ಕೆಲ ತಿಂಗಳಲ್ಲೇ ಸಾರ್ವಜನಿಕರಿಗೆ ಲಸಿಕೆ ಲಭ್ಯ, ಕೈಗೆಟುಕುವ ದರ ನಿರೀಕ್ಷೆ

author img

By

Published : Sep 1, 2022, 7:54 PM IST

first Quadrivalent Human Papillomavirus Vaccine against Cervical Cancer in few months

ಕ್ವಾಡ್ರಿವೇಲೆಂಟ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ ಲಸಿಕೆಗೆ ಸಂಬಂಧಿಸಿದ ಸಂಶೋಧನೆ ಮತ್ತು ಅಭಿವೃದ್ಧಿ (ಆರ್​ಡಿ) ಚಟುವಟಿಕೆಗಳು ಪೂರ್ಣಗೊಂಡಿವೆ. ಈಗ ಸಾರ್ವಜನಿಕರಿಗೆ ಲಭ್ಯವಾಗುವಂತಹ ಮುಂದಿನ ಹಂತವು ನಡೆಯುತ್ತದೆ.

ನವದೆಹಲಿ: ಗರ್ಭಕಂಠದ ಕ್ಯಾನ್ಸರ್ ತಡೆಗಟ್ಟುವಿಕೆಗಾಗಿ ದೇಶಿಯವಾಗಿ ಅಭಿವೃದ್ಧಿಪಡಿಸಲಾದ ಕ್ವಾಡ್ರಿವೇಲೆಂಟ್ ಹ್ಯೂಮನ್ ಪ್ಯಾಪಿಲೋಮಾ ವೈರಸ್ (ಹೆಚ್​​ಪಿವಿ) ಲಸಿಕೆ ಕೆಲವೇ ತಿಂಗಳಲ್ಲಿ ಸಾರ್ವಜನಿಕರಿಗೆ ಲಭ್ಯವಾಗಲಿದೆ. ಇದರ ಬೆಲೆಯು ಕೂಡ 200ರಿಂದ 400 ರೂಪಾಯಿಗಳ ಕೈಗೆಟುಕುವ ರೀತಿಯಲ್ಲಿ ಇರಲಿದೆ.

ಗುರುವಾರ ಹೆಚ್​​ಪಿವಿ ಲಸಿಕೆಯ ವೈಜ್ಞಾನಿಕ ಪ್ರಯೋಗ ಪೂರ್ಣಗೊಳಿಸಿರುವ ಬಗ್ಗೆ ಘೋಷಿಸಲಾಗಿದ್ದು, ಈ ಕಾರ್ಯಕ್ರಮದಲ್ಲಿ ಉದ್ದೇಶಿಸಿ ಮಾತನಾಡಿದ ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಜಿತೇಂದ್ರ ಸಿಂಗ್, ಗರ್ಭಕಂಠದ ಕ್ಯಾನ್ಸರ್ ವಿರುದ್ಧದ ಲಸಿಕೆಗಳ ಅಭಿವೃದ್ಧಿ ಹಾಗೂ ಆರೋಗ್ಯ ರಕ್ಷಣೆಯ ಬಗ್ಗೆ ಕೋವಿಡ್​ ಜಾಗೃತಿ ಮೂಡಿಸಿದೆ ಎಂದರು.

ಅಲ್ಲದೇ, ಆಯುಷ್ಮಾನ್ ಭಾರತ್‌ನಂತಹ ಯೋಜನೆಗಳು ಆರೋಗ್ಯ ರಕ್ಷಣೆ ಮಹತ್ವವನ್ನು ಹೊಂದಿದೆ. ಇದರಲ್ಲಿ ಜೈವಿಕ ತಂತ್ರಜ್ಞಾನ ಇಲಾಖೆಯು ಮುಂದಾಳತ್ವ ವಹಿಸಿದೆ. ಕೆಲ ವೈಜ್ಞಾನಿಕ ಪ್ರಯೋಗಗಳು ಮನ್ನಣೆಯನ್ನು ಪಡೆಯುವುದಿಲ್ಲ. ಆದ್ದರಿಂದ ಈ ಕಾರ್ಯಕ್ರಮವು ವೈಜ್ಞಾನಿಕವಾಗಿ ಪೂರ್ಣಗೊಳಿಸುವಿಕೆಯನ್ನು ಆಚರಿಸುವುದಾಗಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಸಿಇಒ ಆದಾರ್ ಪೂನವಾಲಾ ಮಾಧ್ಯಮದವರೊಂದಿಗೆ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್ ಲಸಿಕೆಗೆ ಕೈಗೆಟುಕುವ ಬೆಲೆ ಇರಲಿದೆ. ಅದು 200-400 ರೂಪಾಯಿಗಳೊಳಗೆಯೇ ಲಭ್ಯವಿರುತ್ತದೆ. ಆದರೆ, ಅಂತಿಮ ಬೆಲೆಯನ್ನು ಇನ್ನೂ ನಿಗದಿ ಮಾಡಿಲ್ಲ. ವರ್ಷಾಂತ್ಯದ ವೇಳೆಗೆ ಈ ಲಸಿಕೆಯನ್ನು ಪ್ರಾರಂಭಿಸಲಾಗುವುದು ಎಂದು ಹೇಳಿದರು.

  • Delhi | The vaccine for cervical cancer will be available in a few months. Will give it to our country first & later to the world. May be priced between Rs 200-400 but prices yet to be finalized. Preparing to make 200 million doses in 2 years: Serum Institute CEO, Adar Poonawalla pic.twitter.com/g4JXfwWNV9

    — ANI (@ANI) September 1, 2022 " class="align-text-top noRightClick twitterSection" data=" ">

200 ಮಿಲಿಯನ್ ಡೋಸ್‌ ಉತ್ಪಾದನೆ: ಮೊದಲು ಲಸಿಕೆಯನ್ನು ಸರ್ಕಾರದ ಮೂಲಕ ಲಭ್ಯವಾಗುವಂತೆ ಮಾಡಲಾಗುವುದು. ಮುಂದಿನ ವರ್ಷದಿಂದ ಕೆಲವು ಖಾಸಗಿ ಪಾಲುದಾರರು ಸಹ ಇದರಲ್ಲಿ ಭಾಗಿಯಾಗಲಿದ್ದಾರೆ. ಪ್ರಸ್ತುತ ಎರಡು ವರ್ಷದಲ್ಲಿ 200 ಮಿಲಿಯನ್ ಡೋಸ್‌ಗಳನ್ನು ತಯಾರಿಸುವ ಯೋಜನೆ ಇದೆ. ಮೊದಲು ಲಸಿಕೆಯನ್ನು ಭಾರತದಲ್ಲೇ ನೀಡಲಾಗುವುದು. ನಂತರ ಇತರ ದೇಶಗಳಿಗೆ ರಫ್ತು ಮಾಡುವ ಯೋಚನೆ ಇದೆ ಎಂದು ತಿಳಿಸಿದ್ದಾರೆ.

ಈ ಲಸಿಕೆಯ ವೈಜ್ಞಾನಿಕ ಪ್ರಯೋಗದಲ್ಲಿ ದೇಶಾದ್ಯಂತ 2 ಸಾವಿರಕ್ಕೂ ಹೆಚ್ಚು ಸ್ವಯಂಸೇವಕರು ಭಾಗವಹಿಸಿದ್ದರು. ಇಂತಹ ಸಂಶೋಧನೆಯಲ್ಲಿ ಖಾಸಗಿ-ಸಾರ್ವಜನಿಕ ಪಾಲುದಾರಿಕೆಗಳು ಬಹಳ ಮುಖ್ಯವಾಗುತ್ತವೆ ಎಂದು ಜೈವಿಕ ತಂತ್ರಜ್ಞಾನ ಇಲಾಖೆಯ ಕಾರ್ಯದರ್ಶಿ ರಾಜೇಶ್ ಗೋಖಲೆ ತಿಳಿಸಿದರು.

ಸಿಎಸ್‌ಐಆರ್‌ನ ಮಹಾನಿರ್ದೇಶಕ ಡಾ.ಎನ್.ಕಲೈಸೆಲ್ವಿ ಮಾತನಾಡಿ, ಗರ್ಭಕಂಠದ ಕ್ಯಾನ್ಸರ್​ಗೆ ಸಂಬಂಧಿಸಿದಂತೆ ಮೊದಲ ಮೆಟ್ಟಿಲು ಮತ್ತು ಸಂಶೋಧನೆಯಾಗಿದೆ. ಈ ರೀತಿಯ ಹೊಸ ಸಂಶೋಧನೆಗೆ ಸರ್ಕಾರವು ಹೆಚ್ಚಿನ ಆದ್ಯತೆ ನೀಡಿದ್ದು, ನಮ್ಮನ್ನು 'ಆತ್ಮನಿರ್ಭರ್'ರನ್ನಾಗಿ ಎಂದು ಹೇಳಿದರು.

ಭಾರತದಲ್ಲಿ ಗರ್ಭಕಂಠದ ಕ್ಯಾನ್ಸರ್ 15ರಿಂದ 44 ವರ್ಷ ವಯಸ್ಸಿನ ಮಹಿಳೆಯರಲ್ಲಿ ಹೆಚ್ಚಾಗಿ ಕಂಡುಬರುವ ಎರಡನೇ ಕ್ಯಾನ್ಸರ್ ಆಗಿದೆ. ಈ ಲಸಿಕೆಯು ಎಲ್ಲ ವಯಸ್ಸಿನವರಿಗೂ ಸುಮಾರು ಸಾವಿರ ಪಟ್ಟು ಹೆಚ್ಚು ದೃಢವಾದ ಪ್ರತಿಕಾಯಗಳನ್ನು ಪ್ರದರ್ಶಿಸಿದೆ. ಈ ಗರ್ಭಕಂಠದ ಕ್ಯಾನ್ಸರ್​ ಲಸಿಕೆ ತಯಾರಿಸಲು ಸೀರಮ್ ಇನ್‌ಸ್ಟಿಟ್ಯೂಟ್​​ಗೆ ಡ್ರಗ್ಸ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) ಮಾರುಕಟ್ಟೆ ಅಧಿಕಾರವನ್ನು ನೀಡಿತ್ತು.

ಏನಿದು ಗರ್ಭಕಂಠದ ಕ್ಯಾನ್ಸರ್?: ಮಹಿಳೆಯರ ಗರ್ಭಕೋಶದ ಕಂಠದ ಭಾಗದಲ್ಲಿ ಈ ಕ್ಯಾನ್ಸರ್‌ ಬೆಳೆಯುತ್ತದೆ. ಸಾಮಾನ್ಯವಾದ ರೋಗ ನಿರೋಧಕ ವ್ಯವಸ್ಥೆ ಹೊಂದಿರುವ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್‌ ಬೆಳವಣಿಗೆಯಾಗಲು 15ರಿಂದ 20 ವರ್ಷ ಬೇಕಾಗುತ್ತದೆ. ಆದರೆ, ರೋಗ ನಿರೋಧಕ ಶಕ್ತಿ ದುರ್ಬಲ ಆಗಿರುವ ಮಹಿಳೆಯರಲ್ಲಿ 5ರಿಂದ 10 ವರ್ಷಗಳಲ್ಲಿ ಕ್ಯಾನ್ಸರ್‌ ಬೆಳೆಯುತ್ತದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ 2018ರಲ್ಲಿ ವಿಶ್ವದಾದ್ಯಂತ 5.70 ಲಕ್ಷ ಮಹಿಳೆಯರಲ್ಲಿ ಗರ್ಭಕಂಠ ಕ್ಯಾನ್ಸರ್‌ ಕಾಯಿಲೆ ಪತ್ತೆಯಾಗಿತ್ತು.

ಇದನ್ನೂ ಓದಿ: ಮಹಿಳಾ ಕೇಂದ್ರಿತ ಹೃದಯ ಪುನರ್ವಸತಿ ಮಾರ್ಗಸೂಚಿ: ಜೀವನ ಮಟ್ಟ ಸುಧಾರಿಸಲು ಸಹಕಾರಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.