ಮಹಿಳಾ ಮೀಸಲಾತಿ ಅನುಷ್ಠಾನ ವಿಳಂಬ.. ಮಸೂದೆ ಮಂಡನೆ ಬರೀ ರಾಜಕೀಯ ಗಿಮಿಕ್: ಕಾಂಗ್ರೆಸ್

ಮಹಿಳಾ ಮೀಸಲಾತಿ ಅನುಷ್ಠಾನ ವಿಳಂಬ.. ಮಸೂದೆ ಮಂಡನೆ ಬರೀ ರಾಜಕೀಯ ಗಿಮಿಕ್: ಕಾಂಗ್ರೆಸ್
women's reservation bill.. ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಂಡಿಸಿದ್ದು, ಅದರ ಅನುಷ್ಠಾನ ವಿಳಂಬವಾಗುವುದಕ್ಕೆ ಕಾಂಗ್ರೆಸ್ ಟೀಕಿಸಿದೆ. ಇದು ಬರೀ ರಾಜಕೀಯ ಗಿಮಿಕ್ ಎಂದಿದೆ.
ನವದೆಹಲಿ: ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಮಂಡಿಸಿದ್ದರೂ, ಅದು ಜಾರಿಯಾಗೋದು 2029 ರಲ್ಲಿ. ಹೀಗಾಗಿ ಇದೊಂದು ಚುನಾವಣಾ ಗಿಮಿಕ್ ಆಗಿದೆ ಎಂದು ಕಾಂಗ್ರೆಸ್ ಟೀಕಿಸಿದೆ. ಜನಗಣತಿ ಮತ್ತು ಕ್ಷೇತ್ರಗಳ ಪುನರ್ವಿಂಗಡಣೆ ನಂತರವೇ ಸರ್ಕಾರ ತಂದಿರುವ ಮಹಿಳಾ ಮೀಸಲಾತಿ ಮಸೂದೆಯು ಜಾರಿಗೆ ಬರಲಿದೆ. ಹೀಗಾಗಿ ಮಂಡಿಸಿರುವ ವಿಧೇಯಕ ಬರೀ ಚುನಾವಣಾ ಗಿಮಿಕ್ನಿಂದ ಕೂಡಿದೆ. ಇದು ಮಹಿಳೆಯರ ಆಶಯಗಳಿಗೆ ಭಾರಿ ದ್ರೋಹ ಎಸಗಿದಂತೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಈ ಬಗ್ಗೆ ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 2024 ರ ಚುನಾವಣೆಗೂ ಮೊದಲು ಜನಗಣತಿ ಮತ್ತು ಕ್ಷೇತ್ರ ಪುನರ್ ವಿಂಗಡಣೆ ಮಾಡಲಾಗುತ್ತದೆಯೇ ಎಂದು ಪ್ರಶ್ನಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರವು 2021 ರಲ್ಲಿ ಆಗಬೇಕಿದ್ದ ಜನಗಣತಿಯನ್ನು ಮುಗಿಸಿಲ್ಲ. ಈಗ ಯಾವುದೇ ದೂರದೃಷ್ಟಿ ಇಲ್ಲದೇ, ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದ್ದಾರೆ. ಲೋಕಸಭೆ ಚುನಾವಣೆಯಲ್ಲಿ ರಾಜಕೀಯ ಲಾಭ ಪಡೆದುಕೊಳ್ಳಲು ನಡೆಸುತ್ತಿರುವ ಕಸರತ್ತು. ಇವರಿಗೆ ಮಹಿಳೆಯರಿಗಿಂತ ರಾಜಕೀಯವೇ ಹೆಚ್ಚು. ಕೋಟ್ಯಂತರ ಭಾರತೀಯ ಮಹಿಳೆಯರಿಗೆ ಮಾಡಿದ ದ್ರೋಹ ಎಂದು ಟೀಕಿಸಿದ್ದಾರೆ.
ಜಿ20 ರಾಷ್ಟ್ರಗಳಲ್ಲಿ ಭಾರತ ಮಾತ್ರ ಜನಗಣತಿಯನ್ನು ನಡೆಸದ ಏಕೈಕ ದೇಶವಾಗಿತ್ತು. ಯಾವುದೇ ಕ್ರಮ ಕೈಗೊಳ್ಳದೇ ಮಹಿಳೆಯರಿಗೆ ಮೀಸಲಾತಿ ಜಾರಿಗೆ ಬರಲಿದೆ ಎಂದು ಕೇಂದ್ರ ಹೇಳುತ್ತಿದೆ. ಮಹಿಳಾ ಮೀಸಲಾತಿ ಮಸೂದೆಯು ಕಾಯಿದೆಯಾಗಿ ಜಾರಿಗೆ ಬರಲು ಸಾಕಷ್ಟು ಸಮಯ ಬೇಕು. ಅದರದ್ದೇ ನಿಯಮಗಳಿವೆ. ಅದ್ಯಾವುದನ್ನೂ ಮಾಡದೇ ಮೀಸಲಾತಿಗೆ ಸರ್ಕಾರ ಮುಂದಾಗಿದೆ. ಮೊದಲ ಜನಗಣತಿ ಮುಗಿಸಬೇಕು. ಕ್ಷೇತ್ರಗಳ ವಿಂಗಡಣೆ ನಡೆದು ಮೀಸಲು ಕ್ಷೇತ್ರ ಸೃಷ್ಟಿಸಬೇಕು. ಇದೆಲ್ಲಾ ನಡೆಸದೇ ಇದ್ದಲ್ಲಿ ಕಾನೂನು ಜಾರಿ ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ.
ಮಸೂದೆ ಜಾರಿಗೆ ನಿಯಮವೇನು?: ಜನಗಣತಿ ಮುಗಿದು, ಕ್ಷೇತ್ರ ಪುನರ್ ವಿಂಗಡಣೆ ಸರ್ಕಸ್ ಆದ ಬಳಿಕವೇ ಮೀಸಲಾತಿ ಜಾರಿಗೆ ಬರುತ್ತದೆ ಎಂದು ಮಸೂದೆ ಹೇಳುತ್ತದೆ. ಮಸೂದೆಯನ್ನು ಜಾರಿ ಮಾಡುವ ಅಸ್ಪಷ್ಟ ಗುರಿಯೊಂದಿಗೆ ವಿಧೇಯಕವನ್ನು ಟೇಬಲ್ ಮಾಡಲಾಗಿದೆ. ಇದೊಂಥರಾ ಇವಿಎಂ ಅಂದರೆ ಈವೆಂಟ್ ಮ್ಯಾನೇಜ್ಮೆಂಟ್ ಹೊರತು ಬೇರೇನೂ ಅಲ್ಲ ಎಂದು ವ್ಯಂಗ್ಯವಾಡಿದ್ದಾರೆ.
ಹೊಸ ಸಂಸತ್ತಿನಲ್ಲಿ ಮಹಿಳಾ ಬಲ ಮಸೂದೆ: ಗಣೇಶ ಚೌತಿಯ ಶುಭದಿನ ಹಿನ್ನೆಲೆ ಸರ್ಕಾರ ವಿಶೇಷ ಅಧಿವೇಶನದ ಕಲಾಪವನ್ನು ಹೊಸ ಸಂಸತ್ ಭವನಕ್ಕೆ ವರ್ಗ ಮಾಡಿದೆ. ಇಲ್ಲಿ ಆರಂಭವಾದ ಕಲಾಪದಲ್ಲಿ ಮೊದಲ ಮಸೂದೆಯಾಗಿ ಮಹಿಳಾ ಮೀಸಲಾತಿಯನ್ನು ಮಂಡಿಸಿತು. ಇದು ರಾಜ್ಯ ಮತ್ತು ರಾಷ್ಟ್ರಮಟ್ಟದ ನೀತಿ ನಿರೂಪಣೆಗಳಲ್ಲಿ ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಗೆ ಇದು ಅವಕಾಶ ನೀಡಲಿದೆ ಎಂದು ಸರ್ಕಾರ ಹೇಳಿದೆ.
