ಕೇಂದ್ರ ಬಜೆಟ್: ನಾಳೆ ಹಣಕಾಸು ಸಚಿವರ ನೇತೃತ್ವದಲ್ಲಿ ಹಲ್ವಾ ಸಮಾರಂಭ

ಕೇಂದ್ರ ಬಜೆಟ್: ನಾಳೆ ಹಣಕಾಸು ಸಚಿವರ ನೇತೃತ್ವದಲ್ಲಿ ಹಲ್ವಾ ಸಮಾರಂಭ
ಬಜೆಟ್ ಮಂಡನೆಗೂ ಮುನ್ನ ನಡೆಯುವ ಸಾಂಪ್ರದಾಯಿಕ ಹಲ್ವಾ ಕಾರ್ಯಕ್ರಮ ಕಳೆದೆರಡು ವರ್ಷ ಕೋವಿಡ್ನಿಂದ ನಡೆದಿರಲಿಲ್ಲ.
ನವದೆಹಲಿ: ಫೆ. 1ರಂದು ಕೇಂದ್ರ ಸರ್ಕಾರ ಬಜೆಟ್ ಮಂಡನೆ ಮಾಡಲಿದೆ. ಬಜೆಟ್ ಮಂಡನೆಗೂ ಮುನ್ನ ಹಣಕಾಸು ಸಚಿವಾಲಯದಿಂದ ಸಾಂಪ್ರದಾಯಿಕ ಹಲ್ವಾ ಸಮಾರಂಭ ನಡೆಯುವುದು ವಾಡಿಕೆ. ಕಳೆದೆರಡು ವರ್ಷಗಳಿಂದ ಕೋವಿಡ್ನಿಂದಾಗಿ ತಡೆಹಿಡಿಯಲಾಗಿದ್ದ ಈ ಕಾರ್ಯಕ್ರಮ ನಾಳೆ ನಡೆಯಲಿದೆ. ಹಲ್ವಾ ಸಮಾರಂಭದ ಬಳಿಕ ಬಜೆಟ್ ಕೆಲಸ ನಡೆಯುತ್ತದೆ. ಹಣಕಾಸು ಸಚಿವಾಲಯದ ನಾರ್ತ್ ಬ್ಲಾಕ್ನ ನೆಲಮಾಳಿಗೆಯಲ್ಲಿ ಅಧಿಕಾರಿಗಳು ಅವಿರತ ಕೆಲಸ ಮಾಡಲಿದ್ದಾರೆ. (ಬಜೆಟ್ ಮುದ್ರಣಗೊಳ್ಳುವವರೆಗೆ ಉದ್ಯೋಗಿಗಳು ಇಲ್ಲಿಯೇ ಇರುತ್ತಾರೆ).
ನಾಳೆ ನಡೆಯಲಿರುವ ಹಲ್ವಾ ಸಮಾರಂಭದಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, ರಾಜ್ಯ ಹಣಕಾಸು ಸಚಿವ ಅನುರಾಗ್ ಠಾಕೂರ್, ಹಣಕಾಸು ಕಾರ್ಯದರ್ಶಿ ಮತ್ತು ಸಚಿವಾಲಯದ ಇತರೆ ಅಧಿಕಾರಿಗಳು ಹಾಜರಿರಲಿದ್ದಾರೆ. ಬಜೆಟ್ ದಾಖಲೆ ಸಿದ್ದಪಡಿಸಿದ ನಂತರ ಹಣಕಾಸು ಸಚಿವರ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಲಿದೆ. ಪ್ರತಿವರ್ಷ ಹಣಕಾಸು ಸಚಿವಾಲಯ ಬಜೆಟ್ ಮಂಡನೆಗೆ ಮುನ್ನ ಈ ಸಂಪ್ರದಾಯಿಕ ಸಮಾರಂಭ ನಡೆಸುತ್ತದೆ. ಈ ಕಾರ್ಯಕ್ರಮದಲ್ಲಿ ಬಜೆಟ್ ಸಿದ್ದತೆಯಲ್ಲಿ ತೊಡಗುವ ನೂರಾರು ಅಧಿಕಾರಿಗಳು ಭಾಗಿಯಾಗುತ್ತಾರೆ.
ಬೃಹತ್ ಕಡಾಯಿ (ಬಾಣಲೆ)ಯಲ್ಲಿ ತಯಾರಾಗುವ ಹಲ್ವಾ ಕಾರ್ಯಕ್ರಮಕ್ಕೆ ನಿರ್ಮಲಾ ಸೀತಾರಾಮನ್ ಚಾಲನೆ ನೀಡುವರು. ಬಳಿಕ ಬಿಸಿ ಬಿಸಿ ಹಲ್ವಾವನ್ನು ಸಿಬ್ಬಂದಿಗೆ ವಿತರಿಸಲಾಗುತ್ತದೆ. ಈ ಸಿಹಿ ತಿನ್ನುವ ಕಾರ್ಯಕ್ರಮದ ಬಳಿಕ ಬಜೆಟ್ ಪ್ರಕ್ರಿಯೆಯಲ್ಲಿ ಭಾಗಿಯಾಗುವ ಅಧಿಕಾರಿ ವರ್ಗ ಹಣಕಾಸು ಸಚಿವಾಲಯದ ನಾರ್ತ್ ಬ್ಲಾಕ್ನಲ್ಲಿರುವ ನೆಲಮಳಿಗೆಯಲ್ಲೇ ತಂಗುತ್ತಾರೆ.
ನೆಲಮಾಳಿಗೆಯಲ್ಲೇ ವಾಸ್ತವ್ಯ: ಬಜೆಟ್ ಸಿದ್ದತೆಯಲ್ಲಿ ಭಾಗಿಯಾಗುವ ಅಧಿಕಾರಿಗಳು ಆಯವ್ಯಯ ಪ್ರಮುಖ ಅಂಶಗಳನ್ನು ಅರಿತಿರುತ್ತಾರೆ. ಬಜೆಟ್ ಮಂಡನೆಗೂ ಹಾಗೂ ಮುದ್ರಣ ಸಮಯದಲ್ಲಿ ಈ ಅಂಶಗಳು ಸೋರಿಕೆಯಾಗುವುದನ್ನು ತಡೆಯುವ ನಿಟ್ಟಿನಲ್ಲಿ ಅವರು 10 ದಿನಗಳ ಕಾಲ ನೆಲಮಾಳಿಗೆಯಲ್ಲಿ ವಾಸ್ತವ್ಯ ಹೂಡುತ್ತಾರೆ. ಈ ವೇಳೆ ಕುಟುಂಬ ಸೇರಿದಂತೆ ಯಾವುದೇ ವ್ಯಕ್ತಿಯ ಸಂಪರ್ಕಕ್ಕೆ ಅವರು ಒಳಗಾಗುವುದಿಲ್ಲ. ಹಣಕಾಸು ಸಚಿವರು ಬಜೆಟ್ ಮಂಡಿಸಿದ ಬಳಿಕವೇ ಇವರೆಲ್ಲರೂ ಇಲ್ಲಿಂದ ಹೊರ ಬರುತ್ತಾರೆ. ಯಾವುದೇ ಕೆಲಸಕ್ಕೂ ಮುನ್ನ ಸಿಹಿ ಹಂಚುವುದರಿಂದ ಶುಭ ಎಂಬ ನಂಬಿಕೆ. ಈ ಹಿನ್ನೆಲೆಯಲ್ಲಿ ಬಜೆಟ್ ಸಿದ್ದತೆಯ ಕಾರ್ಯದಲ್ಲಿ ಭಾಗಿಯಾದವರ ಶ್ರಮಕ್ಕೆ ಮೆಚ್ಚುಗೆ ಸೂಚಿಸುವ ಉದ್ದೇಶದಿಂದ ಈ ಸಂಪ್ರದಾಯವನ್ನು ಬೆಳೆಸಿಕೊಂಡು ಬರಲಾಗಿದೆ.
ಫೆ. 1ಕ್ಕೆ ಬಜೆಟ್ ಮಂಡನೆ: ಇದು ಪ್ರಸ್ತುತ ಸರ್ಕಾರದ ಕೊನೆಯ ಪೂರ್ಣ ಪ್ರಮಾಣದ ಬಜೆಟ್ ಆಗಿರಲಿದೆ. ಹೀಗಾಗಿ, ಸಹಜವಾಗಿಯೇ ಜನರಲ್ಲಿ ನಿರೀಕ್ಷೆಗಳು ಹೆಚ್ಚಿವೆ. ಪ್ರಸಕ್ತ ಬಜೆಟ್‌ನಲ್ಲಿ ಉದ್ಯೋಗ, ಮಕ್ಕಳ ಶಿಕ್ಷಣ, ಗೃಹ ಸಾಲ, ಆರೋಗ್ಯ ವಿಮೆ ಮತ್ತಿತರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ನಿಯಮಗಳು ಬದಲಾಗುವ ಸಾಧ್ಯತೆಯೂ ಇದೆ.
ಇದನ್ನೂ ಓದಿ: ಕೇಂದ್ರ ಬಜೆಟ್ 2023: ಅಭಿವೃದ್ಧಿ ಯೋಜನೆಗಳಿಗೆ ಅಡ್ಡಿಯಾದ 9.4 ಲಕ್ಷ ಕೋಟಿ ಬಡ್ಡಿ ಪಾವತಿ
