ಉದ್ಯಮಿ ಜುಂಜುನ್‌ವಾಲಾ ಪಾಲುದಾರಿಕೆಯ ವಿಮಾನಯಾನ ಕಂಪನಿಗೆ ಕೇಂದ್ರದ ಒಪ್ಪಿಗೆ

author img

By

Published : Oct 12, 2021, 6:56 AM IST

Updated : Oct 12, 2021, 7:19 AM IST

Aviation Ministry gives nod to Rakesh Jhunjhunwala-backed Akasa Air to operate in India

ಏರ್​ ಇಂಡಿಯಾ ಸಂಸ್ಥೆ ಟಾಟಾ (TATA) ತೆಕ್ಕೆಗೆ ಮತ್ತೆ ಸೇರಿಕೊಂಡ ಬಳಿಕ ಆರ್ಥಿಕ ಹೊಡೆತದಿಂದ ಕಂಗಾಲಾಗಿದ್ದ ಈ ವಿಮಾನಯಾನ ಸಂಸ್ಥೆ ಚೇತರಿಸಿಕೊಳ್ಳುವ ನಿರೀಕ್ಷೆ ಹುಟ್ಟುಹಾಕಿದೆ. ಈಗ ಭಾರತೀಯರೇ ನಡೆಸಲಿರುವ ಮತ್ತೊಂದು ಏರ್​ಲೈನ್ಸ್​ಗೆ ಕೇಂದ್ರದ ನಾಗರಿಕ ವಿಮಾನಯಾನ ಸಚಿವಾಲಯ ನಿರಾಕ್ಷೇಪಣಾ ಪ್ರಮಾಣ ಪತ್ರವನ್ನು (NOC) ನೀಡಿದೆ.

ನವದೆಹಲಿ: ದೇಶದ ಖ್ಯಾತ ಉದ್ಯಮಿ ರಾಕೇಶ್ ಜುಂಜುನ್‌ವಾಲಾ ಅವರು ಪಾಲುದಾರರಾಗಿರುವ ಆಕಾಶ ಏರ್ (Akasa Air)​ ಹೆಸರಿನ ಹೊಸ ವಿಮಾನಯಾನ ಸಂಸ್ಥೆಯನ್ನು ಆರಂಭಿಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ನಿರಾಕ್ಷೇಪಣಾ ಪತ್ರ ನೀಡಿದೆ ಎಂದು ಎಸ್ಎನ್​ವಿ ಏವಿಯೇಷನ್ ​​ಪ್ರೈವೇಟ್ ಲಿಮಿಟೆಡ್ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿದೆ.

ಹೊಸ ವಿಮಾನಯಾನ ಸಂಸ್ಥೆಯು 2022ರ ಬೇಸಿಗೆಯೊಳಗೆ ಕಾರ್ಯಾಚರಣೆ ಆರಂಭಿಸುವ ಗುರಿ ಹೊಂದಿದೆ ಎಂದು ಕಂಪನಿ ಹೇಳಿದೆ. ಈ ಕಂಪನಿಯಲ್ಲಿ ರಾಕೇಶ್ ಜುಂಜುನ್‌ವಾಲಾ ಜೊತೆಗೆ ಪಾಲುದಾರರಾಗಿ ಮಾಜಿ ಜೆಟ್ ಏರ್​ವೇಸ್ ಮುಖ್ಯಸ್ಥ ವಿನಯ್ ದುಬೆ ಇರಲಿದ್ದಾರೆ.

'ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ನಮಗೆ ಬೆಂಬಲ ನೀಡುತ್ತಿದೆ. ಸಚಿವಾಲಯವು ನಿರಾಕ್ಷೇಪಣಾ ಪ್ರಮಾಣಪತ್ರವನ್ನು ನೀಡಿರುವುದಕ್ಕೆ ಧನ್ಯವಾದ ಸಲ್ಲಿಸುತ್ತೇವೆ' ಎಂದು ಪ್ರಸ್ತುತ ಆಕಾಶ ಏರ್​ ಸಿಇಓ ಆಗಿರುವ ವಿನಯ್ ದುಬೆ ಹೇಳಿದ್ದಾರೆ.

ಕಂಪನಿ ಈ ಮೊದಲೇ ಆರಂಭವಾಗಿದ್ದರೂ, ಈವರೆಗೆ ಕೇಂದ್ರ ವಿಮಾನಯಾನ ಸಚಿವಾಲಯದಿಂದ ವಿಮಾನ ಹಾರಾಟಕ್ಕೆ ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಪಡೆದುಕೊಂಡಿರಲಿಲ್ಲ. ಈಗ ನಿರಾಕ್ಷೇಪಣಾ ಪತ್ರವನ್ನು ಪಡೆದುಕೊಂಡಿದ್ದು, ಆಪರೇಟರ್ಸ್​ ಸರ್ಟಿಫಿಕೇಟ್ ಮತ್ತಿತರ ಪ್ರಮಾಣ ಪತ್ರಗಳನ್ನು ಪಡೆದ ನಂತರ ವಿಮಾನ ಹಾರಾಟಕ್ಕೆ ಅನುಮತಿ ದೊರೆತಂತಾಗುತ್ತದೆ.

ಆಕಾಶ ಏರ್​ನಲ್ಲಿ ಇಂಡಿಗೋದ ಮಾಜಿ ಅಧ್ಯಕ್ಷ ಆದಿತ್ಯ ಘೋಷ್ ಕೂಡಾ ಇರಲಿದ್ದಾರೆ. ಮೊದಲ ನಾಲ್ಕು ವರ್ಷಗಳಲ್ಲಿ ಸುಮಾರು 70 ವಿಮಾನಗಳ ಮೂಲಕ ಕಾರ್ಯಾಚರಣೆ ನಡೆಸಲು ಕಂಪನಿ ತೀರ್ಮಾನಿಸಿದೆ.

ವಿಮಾನಗಳ ಖರೀದಿಗಾಗಿ ಈಗಾಗಲೇ ಆಕಾಶ ಏರ್​ ಕಂಪನಿಯು ಫ್ರಾನ್ಸ್​​ನ ಏರ್​ಬಸ್​ ಕಂಪನಿಯ ಮುಖ್ಯ ವಾಣಿಜ್ಯ ಅಧಿಕಾರಿ ಕ್ರಿಶ್ಚಿಯನ್ ಶೆರೆರ್ ಅವರೊಂದಿಗೆ ಹಾಗೂ ಅಮೆರಿಕದ ವಿಮಾನ ತಯಾರಕ ಕಂಪನಿ ಬೋಯಿಂಗ್ ಸಂಸ್ಥೆಯ ಜೊತೆಗೆ ಚರ್ಚೆ ನಡೆಸುತ್ತಿದೆ.

'ನಮ್ಮ ರಾಷ್ಟ್ರದ ಪ್ರಗತಿಗಾಗಿ ಅತ್ಯಂತ ದೃಢವಾದ ವಾಯುಸಾರಿಗೆ ವ್ಯವಸ್ಥೆ ಅಗತ್ಯವೆಂದು ನಾವು ನಂಬಿದ್ದೇವೆ. ಆಧುನಿಕ, ದಕ್ಷ ಮತ್ತು ಗುಣಮಟ್ಟದ ವಿಮಾನಯಾನ ಸೇವೆ ನೀಡಲು ನಾವು ಸಜ್ಜಾಗಿದ್ದೇವೆ' ಎಂದು ವಿನಯ್ ದುಬೆ ಹೇಳಿದ್ದಾರೆ.

ಇದನ್ನೂ ಓದಿ:

ಅತಿ ಕಡಿಮೆ ದರದಲ್ಲಿ ವಿಮಾನ ಸೇವೆ: 70 ವಿಮಾನ ಖರೀದಿಗೆ ಕೋಟ್ಯಧಿಪತಿ ಜುನ್‌ಜುನ್‌ವಾಲ ಪ್ಲಾನ್‌

ಈ ಕಂಪನಿಯ 1 ಕೋಟಿ ಷೇರು ಖರೀದಿಸಿದ ರಾಕೇಶ್ ಜುಂಜನ್​​​ವಾಲಾ: ಈ ಷೇರುಗಳ ಬೆಲೆಯಲ್ಲಿ ಶೇ 3.6ರಷ್ಟು ಏರಿಕೆ

Last Updated :Oct 12, 2021, 7:19 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.