ಫೆ.4 ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆ: ಪಿಸಿಬಿ - ಬಿಸಿಸಿಐ ಜಟಾಪಟಿ ಸಾಧ್ಯತೆ!

ಫೆ.4 ರಂದು ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಸಭೆ: ಪಿಸಿಬಿ - ಬಿಸಿಸಿಐ ಜಟಾಪಟಿ ಸಾಧ್ಯತೆ!
ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ತುರ್ತು ಸಭೆ ಫೆಬ್ರವರಿ 4 ರಂದು ನಡೆಯಲಿದೆ. ಈ ಸಮಯದಲ್ಲಿ, ಬಿಸಿಸಿಐ ಮತ್ತು ಪಿಸಿಬಿ ಮಧ್ಯೆ ಕ್ರಿಕೆಟ್ ಕ್ಯಾಲೆಂಡರ್‌ಗೆ ಸಂಬಂಧಿಸಿದಂತೆ ಜಟಾಪಟಿ ಉಂಟಾಗುವ ಸಾಧ್ಯತೆಯಿದೆ. ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದರೆ ಉಭಯ ಪಕ್ಷಗಳ ನಡುವೆ ವಿವಾದ ಏರ್ಪಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ನವದೆಹಲಿ: ಫೆಬ್ರವರಿ 4 ರಂದು ನಡೆಯಲಿರುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ತುರ್ತು ಸಭೆಯಲ್ಲಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಹಾಗೂ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ (ಪಿಸಿಬಿ) ಗಳ ಮಧ್ಯೆ ತೀವ್ರ ಜಟಾಪಟಿ ನಡೆಯುವ ಸಾಧ್ಯತೆಯಿದೆ. 2023ರ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಕ್ಯಾಲೆಂಡರ್ ಅನ್ನು ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಘೋಷಣೆ ಮಾಡಿರುವ ಕುರಿತಾಗಿ ಈ ಜಟಾಪಟಿ ನಡೆಯಬಹುದು. ತಮ್ಮ ಜೊತೆಗೆ ಯಾವುದೇ ಚರ್ಚೆ ನಡೆಸದೇ ಏಕಪಕ್ಷೀಯವಾಗಿ ಕ್ಯಾಲೆಂಡರ್ ನಿರ್ಧರಿಸಲಾಗಿದೆ ಎಂದು ಪಿಸಿಬಿ ಆರೋಪಿಸಿದೆ. ಜಯ್ ಶಾ ಏಶಿಯನ್ ಕ್ರಿಕೆಟ್ ಕೌನ್ಸಿಲ್‌ನ ಅಧ್ಯಕ್ಷರೂ ಆಗಿರುವುದು ಗಮನಾರ್ಹ.
ಮೂಲಗಳ ಪ್ರಕಾರ, ಪಿಸಿಬಿಯು ತುರ್ತು ಎಸಿಸಿ ಮಂಡಳಿ ಸಭೆ ನಡೆಸುವಂತೆ ಕೋರಿದ್ದು, ಮುಂದಿನ ತಿಂಗಳು ಈ ಸಭೆ ನಡೆಯಲಿದೆ ಎಂದು ಪಿಸಿಬಿ ಅಧ್ಯಕ್ಷ ನಜಮ್ ಸೇಥಿ ಘೋಷಿಸಿದ್ದಾರೆ. ಕೆಲ ಸಮಯದಿಂದ ಎಸಿಸಿ ಮಂಡಳಿಯ ಸಭೆ ನಡೆದಿಲ್ಲ ಮತ್ತು ಅನೇಕ ನಿರ್ಧಾರಗಳನ್ನು ತೆಗೆದುಕೊಳ್ಳಲಾಗುತ್ತಿದೆ. ಇಂತಹ ಒಂದು ನಿರ್ಧಾರವನ್ನು ನಾವು ಪ್ರಶ್ನಿಸಿದ್ದೇವೆ ಎಂದು ಸೇಥಿ ಟಿವಿ ಕಾರ್ಯಕ್ರಮವೊಂದರಲ್ಲಿ ಹೇಳಿದ್ದರು. ಬೋರ್ಡ್ ಮೀಟಿಂಗ್ ನಡೆಸುವಂತೆ ನಾವು ಅವರನ್ನು ಮನವೊಲಿಸಲು ಸಫಲರಾಗಿದ್ದೇವೆ ಮತ್ತು ನಾನು ಅದರಲ್ಲಿ ಭಾಗವಹಿಸುತ್ತಿರುವುದು ಒಳ್ಳೆಯ ಸುದ್ದಿಯಾಗಿದೆ ಎಂದು ಅವರು ತಿಳಿಸಿದ್ದಾರೆ.
ಪಾಕಿಸ್ತಾನದಲ್ಲಿ 2023 ರಲ್ಲಿ ನಡೆಯಲಿರುವ ಏಷ್ಯಾ ಕಪ್ ಕ್ರಿಕೆಟ್ ಟೂರ್ನಿಯು ಎರಡೂ ದೇಶಗಳ ಮಧ್ಯದ ವಿವಾದದ ಕೇಂದ್ರ ಬಿಂದುವಾಗಿದೆ. ಭಾರತವು ಪಾಕಿಸ್ತಾನಕ್ಕೆ ಪ್ರಯಾಣಿಸಲು ಸಾಧ್ಯವಾಗದ ಕಾರಣ ಪಂದ್ಯಾವಳಿಯನ್ನು ಮತ್ತೊಂದು ಸ್ಥಳಕ್ಕೆ ಸ್ಥಳಾಂತರಿಸಬೇಕು ಎಂದು ಶಾ ಹೇಳಿದ್ದಾರೆ. ಇದಕ್ಕೆ ಅಂದಿನ ಪಿಸಿಬಿ ಮುಖ್ಯಸ್ಥ ರಮೀಜ್ ರಾಜಾ ಆಕ್ಷೇಪ ವ್ಯಕ್ತಪಡಿಸಿದ್ದರು. ಈ ವರ್ಷದ ಕೊನೆಯಲ್ಲಿ ಏಕದಿನ ವಿಶ್ವಕಪ್‌ಗಾಗಿ ಪಾಕಿಸ್ತಾನ ಭಾರತಕ್ಕೆ ಪ್ರಯಾಣಿಸುವುದಿಲ್ಲ ಎಂದು ರಮೀಜ್ ಹೇಳಿದ್ದರು.
ಎಸಿಸಿ ಬೋರ್ಡ್ ಮೀಟಿಂಗ್ ಕರೆಯುವಂತೆ ಒತ್ತಾಯ: ಕಳೆದ ತಿಂಗಳಷ್ಟೇ ಸೇಥಿ ಪಿಸಿಬಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದು, ಈ ವಿಷಯದಲ್ಲಿ ಚರ್ಚೆ ನಡೆಸಲು ಎಸಿಸಿ ಬೋರ್ಡ್ ಮೀಟಿಂಗ್ ಕರೆಯುವಂತೆ ಒತ್ತಾಯಿಸಿದ್ದರು. ನಾವು ಇದರಲ್ಲಿ ಏನು ಮಾಡಬಹುದು ಎಂಬುದನ್ನು ನೋಡಬೇಕಿದೆ. ನಾವು ಇನ್ನೊಂದು ಕೇಸ್ನಲ್ಲಿ ಹೋರಾಟ ಮಾಡಲಾರೆವು. ಆ ಪ್ರಕರಣವನ್ನು ಸರಿಯಾಗಿ ನಿಭಾಯಿಸಲಾಗಲಿಲ್ಲ ಎಂದು ನನಗನಿಸುತ್ತದೆ.
ನಾವು ಅದರಲ್ಲಿ ಸರಿಯಾಗಿ ಹೋರಾಟ ನಡೆಸಲಿಲ್ಲ. ಈ ಪ್ರಕರಣವನ್ನು ಮೈಕ್ರೋಸ್ಕೋಪ್ನಿಂದ ನೋಡಿದರೂ ಪ್ರಕರಣ ಪಾಕಿಸ್ತಾನ ಪರವಾಗಿದೆ ಎಂದು ನ್ಯಾಯಾಧೀಶರು ಕೂಡ ಹೇಳಿದ್ದರು. ಆದರೆ, ಇದನ್ನು ದುರ್ಬೀನಿನಿಂದ ನೋಡಿದರೆ ಈ ಪ್ರಕರಣ ಭಾರತದ ಕಡೆಗೆ ವಾಲುತ್ತಿದೆ. ಸೂಕ್ಷ್ಮತೆಗಳನ್ನು ನೋಡಿದರೆ ಇದು ಪಾಕಿಸ್ತಾನದ ಪರವಾಗಿದೆ. ಆದರೆ, ಭಾರತ ಸರ್ಕಾರವು ಅವರು ಪಾಕಿಸ್ತಾನ ಪ್ರವಾಸಕ್ಕೆ ಬರಲು ಅನುಮತಿ ನೀಡುತ್ತಿಲ್ಲ ಎಂದು ಹೇಳುತ್ತಿದ್ದಾರೆ ಎಂದು ಸೇಥಿ ಹೇಳಿದ್ದಾರೆ. ಇದೇ ವಿಷಯವಾಗಿ ಎಸಿಸಿ ಸಭೆಯಲ್ಲಿ ಕಾವೇರಿದ ಚರ್ಚೆ ನಡೆಯುವ ಸಾಧ್ಯತೆಯಿದೆ.
ಏನಿದು ಎಸಿಸಿ: ACC ಎಂದೂ ಕರೆಯಲ್ಪಡುವ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಏಷ್ಯಾದಲ್ಲಿ ಕ್ರಿಕೆಟ್ ಕ್ರೀಡೆಯನ್ನು ಉತ್ತೇಜಿಸಲು ಮತ್ತು ಅಭಿವೃದ್ಧಿಪಡಿಸಲು 1983 ರಲ್ಲಿ ಸ್ಥಾಪಿಸಲಾದ ಕ್ರಿಕೆಟ್ ಸಂಸ್ಥೆಯಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್‌ಗೆ ಅಧೀನವಾಗಿರುವ ಕೌನ್ಸಿಲ್ ಏಷ್ಯಾ ಖಂಡದ ಪ್ರಾದೇಶಿಕ ಆಡಳಿತ ಸಂಸ್ಥೆಯಾಗಿದೆ. ಜಯ್ ಶಾ ಏಷ್ಯನ್ ಕ್ರಿಕೆಟ್ ಕೌನ್ಸಿಲ್‌ನ ಪ್ರಸ್ತುತ ಅಧ್ಯಕ್ಷರಾಗಿದ್ದಾರೆ.
ಇದನ್ನೂ ಓದಿ: ನ್ಯೂಜಿಲ್ಯಾಂಡ್ ವಿರುದ್ಧ ಸರಣಿ ಗೆದ್ದ ಭಾರತ: ಬಾಬರ್ ಆಜಂ ವಿರುದ್ಧ ಮಾಜಿ ಕ್ರಿಕೆಟಿಗರಿಂದ ಟೀಕಾ ಪ್ರಹಾರ
