ಋಷಿಕೊಂಡದ ಸಿಎಂ ಕ್ಯಾಂಪ್ ಆಫೀಸ್ ನಿರ್ಮಾಣದ ವೆಚ್ಚ ಬಹಿರಂಗ.. ಒಟ್ಟು ಖರ್ಚೆಷ್ಟು ಗೊತ್ತಾ?

ಋಷಿಕೊಂಡದ ಸಿಎಂ ಕ್ಯಾಂಪ್ ಆಫೀಸ್ ನಿರ್ಮಾಣದ ವೆಚ್ಚ ಬಹಿರಂಗ.. ಒಟ್ಟು ಖರ್ಚೆಷ್ಟು ಗೊತ್ತಾ?
ವಿಶಾಖಪಟ್ಟಣಂನ ಋಷಿಕೊಂಡದಲ್ಲಿ ಸಿಎಂ ಕ್ಯಾಂಪ್ ಆಫೀಸ್ ನಿರ್ಮಾಣಕ್ಕೆ 433 ಕೋಟಿ ರೂ. ಖರ್ಚಾಗಿದೆ ಎಂದು ಆಂಧ್ರಪ್ರದೇಶದ ಸರ್ಕಾರ ಬಹಿರಂಗಪಡಿಸಿದೆ.
ವಿಶಾಖಪಟ್ಟಣಂ (ಆಂಧ್ರಪ್ರದೇಶ ): ವಿಶಾಖಪಟ್ಟಣಂನ ಋಷಿಕೊಂಡದಲ್ಲಿ ಸಿಎಂ ಕ್ಯಾಂಪ್ ಆಫೀಸ್ ನಿರ್ಮಾಣಕ್ಕೆ ತಗುಲಿದ ವೆಚ್ಚವನ್ನು ಎಪಿ ಸರ್ಕಾರ ಕೊನೆಗೂ ಬಹಿರಂಗಪಡಿಸಿದೆ. ಇದಕ್ಕಾಗಿ 433 ಕೋಟಿ ರೂ. ಖರ್ಚಾಗಿದೆ ಎಂದಿದೆ. ಇದು ಅಂದಾಜು ವೆಚ್ಚಕ್ಕಿಂತ ಶೇ.16 ರಷ್ಟು ಹೆಚ್ಚು ಎಂಬುದು ತಿಳಿದು ಬಂದಿದೆ. ಈ ಹಿಂದೆ ಋಷಿಕೊಂಡ ಪುನರಾಭಿವೃದ್ಧಿ ಯೋಜನೆ ಹೆಸರಿನಲ್ಲಿ ಆಂಧ್ರಪ್ರದೇಶ ಪ್ರವಾಸೋದ್ಯಮ ಅಭಿವೃದ್ಧಿ ನಿಗಮವು 350.16 ಕೋಟಿ ರೂ.ಗಳನ್ನು ಹಂಚಿಕೆ ಮಾಡಿತ್ತು.
ನಂತರ ಯೋಜನೆಗೆ ಸರ್ಕಾರ ಹೆಚ್ಚುವರಿ ಹಣ ಹಂಚಿಕೆಗಳನ್ನು ಮಾಡಿತ್ತು. ಕಳಿಂಗ, ವೆಂಗಿ, ಗಜಪತಿ, ವಿಜಯನಗರ ಬ್ಲಾಕ್ ಹೆಸರಲ್ಲಿ ನಿರ್ಮಾಣವಾಗಿರುವ ಈ ಯೋಜನೆಗೆ ತಗಲುವ ವೆಚ್ಚ ಎಷ್ಟು ಎಂಬುದು ಈವರೆಗೆ ಬಹಿರಂಗವಾಗಿರಲಿಲ್ಲ. ಜಿಒಗಳನ್ನು ಆನ್‌ಲೈನ್‌ನಲ್ಲಿ ಇರಿಸಲು ಏನಾದರೂ ಆಕ್ಷೇಪವಿದೆಯೇ? ಎಂದು ಹೈಕೋರ್ಟ್ ಪ್ರಶ್ನಿಸಿದ್ದರಿಂದ, ಎಪಿ ಗೆಜೆಟ್ ಎಲ್ಲ ಇಲಾಖೆಗಳ ಜಿಒಗಳನ್ನು ವೆಬ್‌ಸೈಟ್‌ನಲ್ಲಿ ಹಾಕುತ್ತಿದೆ. ಇದರಿಂದಾಗಿ ಸಿಎಂ ಕ್ಯಾಂಪ್ ಕಚೇರಿ ಕಟ್ಟಡಗಳ ಹಂಚಿಕೆ ಹಾಗೂ ವೆಚ್ಚದ ವಿವರಕ್ಕೆ ಸಂಬಂಧಿಸಿದ ಜಿಒಗಳು ಹೊರಬಿದ್ದಿವೆ.
ಋಷಿಕೊಂಡ ಯೋಜನೆಗೆ ಸಂಬಂಧಿಸಿದಂತೆ ಸರ್ಕಾರ ಶನಿವಾರ ರಾತ್ರಿ ಏಕಕಾಲದಲ್ಲಿ 10 ಜಿಒಗಳನ್ನು ಅಪ್‌ಲೋಡ್ ಮಾಡಿದೆ. ಹೆಚ್ಚಿನ ಕಾರ್ಯಗಳನ್ನು ಸಣ್ಣ ಪ್ರಮಾಣದಲ್ಲಿ ವಿಂಗಡಿಸಲಾಗಿದೆ ಮತ್ತು ಹಂಚಲಾಗುತ್ತದೆ. ಕಾಮಗಾರಿಯಲ್ಲಿ 100 ಕೋಟಿ ಮೀರಿದರೆ ನ್ಯಾಯಾಂಗ ಪರಿಶೀಲನೆಗೆ ಹೋಗಬಹುದಾಗಿದೆ. ಮೊದಲಿಗೆ ಇವು ಪ್ರವಾಸಿ ಕಟ್ಟಡಗಳು ಎಂದು ಸರ್ಕಾರ ಹೇಳಿತ್ತು. ಬಳಿಕ ಐಎಎಸ್ ಅಧಿಕಾರಿಗಳನ್ನೊಳಗೊಂಡ ಸಮಿತಿ ರಚಿಸಿ ಸಿಎಂ ಕ್ಯಾಂಪ್ ಆಫೀಸ್ ಸ್ಥಾಪನೆಗೆ ಅನುಕೂಲವಾಗಿದೆ ಎಂದು ವರದಿಯನ್ನು ತಯಾರಿಸಿದೆ.
ಮೂರು ಹಂತದಲ್ಲಿ ಕಾಮಗಾರಿ: ಋಷಿಕೊಂಡ ಮರು ಅಭಿವೃದ್ಧಿ ಯೋಜನೆ ಹೆಸರಿನಲ್ಲಿ ಸರ್ಕಾರ ಅಲ್ಲಿ ಕಾಮಗಾರಿ ಆರಂಭಿಸಿದೆ. ಎಪಿ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಆಶ್ರಯದಲ್ಲಿ ಮೂರು ಹಂತಗಳಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ. ಯೋಜನೆಯ ಅನುಷ್ಠಾನದ ಭಾಗವಾಗಿ ಮೊದಲ ಹಂತದ ಕಾಮಗಾರಿಗೆ ರೂ.92 ಕೋಟಿ ಮಂಜೂರು ಮಾಡಲಾಗಿದ್ದು, ನಂತರ ಅದನ್ನು ರೂ.159 ಕೋಟಿಗೆ ಹೆಚ್ಚಿಸಲಾಗಿದೆ. ಎರಡನೇ ಹಂತದ ಕಾಮಗಾರಿಗೆ 94.49 ಕೋಟಿ ವೆಚ್ಚ ಮಾಡಲಾಗಿದೆ. ಮೂರನೇ ಹಂತದಲ್ಲಿ ರೂ.112.76 ಕೋಟಿ ವೆಚ್ಚ ಹಂಚಲಾಗಿದೆ.
ರಸ್ತೆ, ಕುಡಿಯುವ ನೀರು ಪೂರೈಕೆ, ವಿದ್ಯುತ್, ಒಳಚರಂಡಿ ಮತ್ತಿತರ ಕಾಮಗಾರಿಗಳಿಗೆ 46 ಕೋಟಿ ರೂ. ವೆಚ್ಚ ಮಾಡಲಾಗಿದೆ. ರೂ.21.83 ಕೋಟಿಗಳನ್ನು ಲ್ಯಾಂಡ್ ಸ್ಕೇಪಿಂಗ್ ಕಾಮಗಾರಿಗೆ ಖರ್ಚು ಮಾಡಲಾಗಿದೆ. ಮೂರನೇ ಹಂತದ ಕಾಮಗಾರಿಗೆ ರೂ.77.86 ಕೋಟಿ ಅಂದಾಜು ಟೆಂಡರ್ ಕರೆಯಲಾಗಿದೆ. 16.46% ಹೆಚ್ಚಿನ ಬೆಲೆ ಮತ್ತು ರೂ.90.68 ಕೋಟಿಗೆ ಕಾಮಗಾರಿಗಳನ್ನು ಹಸ್ತಾಂತರಿಸಲಾಗಿದೆ.
ಶಾಖ ನಿರೋಧಕ ಗೋಡೆಗಳು : ಇಂಟರ್‌ಲಾಕಿಂಗ್ ರಾಫ್ಟರ್‌ಗಳು ಮತ್ತು ಶಾಖ ಮತ್ತು ನೀರನ್ನು ತಡೆಯಲು 18 ಎಂಎಂ ದಪ್ಪದ ಪ್ಲೈವುಡ್ ಅನ್ನು ಗೋಡೆಗಳಲ್ಲಿ ಅಳವಡಿಸಲಾಗಿದೆ.
ಶಾಖ, ಬ್ಯಾಕ್ಟೀರಿಯಾ, ನೀರು ಮತ್ತು ರಾಸಾಯನಿಕಗಳಿಂದ ಹಾನಿಯಾಗದಂತೆ 3 ಎಂಎಂ ಮತ್ತು 9 ಎಂಎಂ ದಪ್ಪದ ಲ್ಯಾಮಿನೇಟೆಡ್ ಪ್ಯಾನಲ್‌ಗಳ ಜೊತೆಗೆ ಆಧುನಿಕ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. 138 ಆಧುನಿಕ ಸಿಂಗಲ್ ಸೀಟರ್ ಸೋಫಾಗಳು, 42 ಎರಡು ಆಸನಗಳ ಸೋಫಾಗಳು, 25 ಮೂರು ಆಸನಗಳ ಸೋಫಾಗಳು, 721 ಕಾರ್ಯನಿರ್ವಾಹಕ ಕುರ್ಚಿಗಳು, 205 ಟೇಬಲ್‌ಗಳು, 20 ಹಾಸಿಗೆಗಳು ವಿಶ್ರಾಂತಿಗಾಗಿ ವ್ಯವಸ್ಥೆ ಮಾಡಲಾಗಿದೆ. ಪೀಠೋಪಕರಣಗಳಿಗೆ 14 ಕೋಟಿ ರೂ.ಗೂ ಹೆಚ್ಚು ಖರ್ಚು ಮಾಡಲಾಗಿದೆ ಎಂದಿದೆ.
