17 ಮಂದಿ ಸಾವಿಗೆ ಕಾರಣವಾಗಿದ್ದ ಗೋಧ್ರೋತ್ತರ ಗಲಭೆ: 22 ಆರೋಪಿಗಳನ್ನ ಖುಲಾಸೆಗೊಳಿಸಿದ ಗುಜರಾತ್​ ನ್ಯಾಯಾಲಯ

author img

By

Published : Jan 25, 2023, 3:37 PM IST

Gujarath Court

ಗೋಧ್ರೋತ್ತರ ಗಲಭೆ ಪ್ರಕರಣ - ಕೋಮುಗಲಭೆಯಲ್ಲಿ 17 ಮಂದಿ ಕೊಲೆ ಮಾಡಿ, ಸಾಕ್ಷ್ಯ ನಾಶ - ಆರೋಪಿಗಳು ಖುಲಾಸೆ

ಗೋಧ್ರಾ (ಗುಜರಾತ್): 2002 ಗೋಧ್ರಾ ಹತ್ಯಾಕಾಂಡ ನಂತರದ ಗಲಭೆಯಲ್ಲಿ ಇಬ್ಬರು ಮಕ್ಕಳು ಸೇರಿದಂತೆ ಅಲ್ಪಸಂಖ್ಯಾತ ಸಮುದಾಯದ 17 ಮಂದಿಯನ್ನು ಹತ್ಯೆ ಮಾಡಿ, ಸಾಕ್ಷಿ ನಾಶ ಪಡಿಸಲು ದೇಹಗಳನ್ನು ಸುಟ್ಟು ಹಾಕಿದ್ದ ಆರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ 22 ಜನರನ್ನು ದೋಷಮುಕ್ತಗೊಳಿಸಿ ಗುಜರಾತ್‌ನ ಪಂಚಮಹಲ್ ಜಿಲ್ಲೆಯ ಹಲೋಲ್ ಪಟ್ಟಣದ ನ್ಯಾಯಾಲಯ ಆದೇಶ ಹೊರಡಿಸಿದೆ.

ಗೋಧ್ರಾ ಹತ್ಯಾಕಾಂಡ ನಂತರ 2002 ರ ಫೆಬ್ರವರಿ 28ರಂದು ನಡೆದ ಗಲಭೆಯಲ್ಲಿ ಅಲ್ಪಸಂಖ್ಯಾತ ಸಮುದಾಯದ 17 ಮಂದಿಯನ್ನು ಕೊಲೆ ಮಾಡಲಾಗಿತ್ತು. ಮಾತ್ರವಲ್ಲದೇ ಸಾಕ್ಷ್ಯ ನಾಶ ಪಡಿಸಲು ಅವರ ದೇಹಗಳನ್ನು ದಹನ ಮಾಡಲಾಗಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಹರ್ಷ್ ತ್ರಿವೇದಿ ಅವರು ಆರೋಪಿಗಳ ವಿರುದ್ಧ ಸಾಕ್ಷ್ಯಾಧಾರಗಳ ಕೊರತೆಯಿಂದ ಎಲ್ಲ ಆರೋಪಿಗಳನ್ನು ಖುಲಾಸೆಗೊಳಿಸಿ ತೀರ್ಪು ನೀಡಿದ್ದಾರೆ. ಅದರಲ್ಲಿ ಎಂಟು ಮಂದಿ ಆರೋಪಿಗಳು ಈ ಪ್ರಕರಣದ ವಿಚಾರಣೆ ಸಮಯದಲ್ಲಿ ಸಾವನ್ನಪ್ಪಿದ್ದರು ಎಂದು ಆರೋಪಿಗಳ ಪರ ವಕೀಲ ಗೋಪಾಲಸಿಂಹ ಸೋಲಂಕಿ ತಿಳಿಸಿದ್ದಾರೆ.

ಘಟನೆ ಹಿನ್ನೆಲೆ: ಫೆಬ್ರವರಿ 27, 2002 ರಂದು ಪಂಚಮಹಲ್ ಜಿಲ್ಲೆಯ ಗೋಧ್ರಾ ಪಟ್ಟಣದ ಬಳಿ ಜನ ಸಮೂಹವೊಂದು ಸಾಬರಮತಿ ಎಕ್ಸ್‌ಪ್ರೆಸ್‌ನ ಬೋಗಿಗೆ ಬೆಂಕಿ ಇಟ್ಟಿತ್ತು. ಈ ವಿಧ್ವಂಸಕ ಘಟನೆಯಲ್ಲಿ 59 ಮಂದಿ ಸಾವನ್ನಪ್ಪಿದ್ದರು. ಅದರಲ್ಲಿ ಬಹುತೇಕರು ಅಯೋಧ್ಯೆಯಿಂದ ವಾಪಸ್​ ಆಗುತ್ತಿದ್ದ ಕರಸೇವಕರಾಗಿದ್ದರು. ಈ ಘಟನೆ ನಡೆದ ಒಂದು ದಿನದ ನಂತರ ರಾಜ್ಯದ ವಿವಿಧ ಭಾಗಗಳಲ್ಲಿ ಕೋಮು ಗಲಭೆ ಭುಗಿಲೆದ್ದಿತ್ತು. ಗೋಧ್ರಾದಲ್ಲಿ ದುಷ್ಕರ್ಮಿಗಳು ಭಾರತೀಯ ರೈಲ್ವೆ ಕೋಚ್‌ಗೆ ಬೆಂಕಿ ಹಚ್ಚಿದ ನಂತರ ಹಿಂಸಾತ್ಮಕ ಗುಂಪುಗಳು ರಾಜ್ಯದ ಸಮುದಾಯವೊಂದನ್ನು ಗುರಿಯಾಗಿಸಿಕೊಂಡು ಆಕ್ರೋಶ ವ್ಯಕ್ತಪಡಿಸಿದ್ದವು.

ಗೋಧ್ರಾ ಹತ್ಯಾಕಾಂಡದ ನಂತರ ರಾಜ್ಯದ ವಿವಿಧ ಭಾಗಗಳಲ್ಲಿ ನಡೆದ ಕೋಮುಗಲಭೆಯಲ್ಲಿ ಜೀವಗಳು ಬಲಿಯಾಗಿದ್ದು ಮಾತ್ರವಲ್ಲದೇ, ವ್ಯಾಪಕವಾದ ಆಸ್ತಿ ನಷ್ಟ, ಎಷ್ಟೋ ಜನರು ತಮ್ಮ ಮನೆಗಳನ್ನು ಕಳೆದುಕೊಂಡಿದ್ದರು. ದೇಲೋಲ್ ಗ್ರಾಮದಲ್ಲಿ ನಡೆದ ಹಿಂಸಾಚಾರದ ನಂತರ ಕೊಲೆ ಮತ್ತು ಗಲಭೆಗೆ ಸಂಬಂಧಿಸಿದಂತೆ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳ ಅಡಿಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.

ಈ ಘಟನೆ ನಡೆದ ಸುಮಾರು ಎರಡು ವರ್ಷಗಳ ನಂತರ ಗಲಭೆಯಲ್ಲಿ ಭಾಗಿಯಾಗಿದ್ದಕ್ಕಾಗಿ 22 ಜನರನ್ನು ಬಂಧಿಸಿದ್ದ ಪೊಲೀಸ್ ಇನ್ಸ್‌ಪೆಕ್ಟರ್ ಹೊಸದಾಗಿ ಪ್ರಕರಣ ದಾಖಲಿಸಿ, ಮತ್ತೊಂದು ಎಫ್​ಐಆರ್​ ದಾಖಲಿಸಿದ್ದರು. ಸಂತ್ರಸ್ತರ ಸುಟ್ಟ ದೇಹಗಳು ಪತ್ತೆಯಾಗಿಲ್ಲ. ಆರೋಪಿಗಳ ವಿರುದ್ಧ ಸಾಕಷ್ಟು ಪುರಾವೆಗಳನ್ನು ಸಂಗ್ರಹಿಸಲು ಪ್ರಾಸಿಕ್ಯೂಷನ್‌ಗೆ ಸಾಧ್ಯವಾಗಲಿಲ್ಲ ಎಂದು ಪ್ರತಿವಾದಿ ವಕೀಲ ಸೋಲಂಕಿ ಹೇಳಿದರು.

ಪೊಲೀಸರು ನದಿಯ ದಡದಲ್ಲಿದ್ದ ಪ್ರತ್ಯೇಕ ಸ್ಥಳದಿಂದ ಮೂಳೆಗಳನ್ನು ವಶಪಡಿಸಿಕೊಂಡಿದ್ದರು. ಆದರೆ ಅವುಗಳು ಸಂತ್ರಸ್ತರ ಗುರುತನ್ನೂ ಪತ್ತೆಹಚ್ಚಲು ಸಾಧ್ಯವಾಗದ ಮಟ್ಟಿಗೆ ಸುಟ್ಟುಹೋಗಿದ್ದವು. ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ನ್ಯಾಯಾಲಯವು ಎಲ್ಲಾ 22 ಆರೋಪಿಗಳನ್ನು ಖುಲಾಸೆಗೊಳಿಸಿದೆ ಎಂದು ಅವರು ಹೇಳಿದರು.

ಇದನ್ನೂ ಓದಿ: ಗೋಧ್ರಾ ರೈಲು ಹತ್ಯಾಕಾಂಡದ ಅಪರಾಧಿ ಫಾರೂಕ್​ಗೆ ಸುಪ್ರೀಂ ಕೋರ್ಟ್ ಜಾಮೀನು

ETV Bharat Logo

Copyright © 2024 Ushodaya Enterprises Pvt. Ltd., All Rights Reserved.