ಕರ್ನಾಟಕ

karnataka

ವೀಳ್ಯದೆಲೆಗೆ ಬಾಧಿಸಿದ ಹೊಸ ರೋಗ; ದಾವಣಗೆರೆ ಬೆಳ್ಳೊಡಿ ರೈತರು ಕಂಗಾಲು

By

Published : Jun 4, 2023, 1:12 PM IST

Updated : Jun 4, 2023, 1:35 PM IST

ಎಲೆ ಬಳ್ಳಿ ರೋಗ

ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ರೈತರನ್ನು ವೀಳ್ಯದೆಲೆಗೆ ಅಪ್ಪಳಿಸಿದ ಹೊಸ ರೋಗ ಚಿಂತೆಗೀಡು ಮಾಡಿದೆ.

ವೀಳ್ಯದೆಲೆಗೆ ಬಾಧಿಸಿದ ಹೊಸ ರೋಗದ ಕುರಿತು ರೈತರ ಅಳಲು

ದಾವಣಗೆರೆ: ಹಬ್ಬ ಹರಿದಿನ, ಗೃಹ ಪ್ರವೇಶ, ಮದುವೆ ಸಮಾರಂಭ ಹೀಗೆ ಯಾವುದೇ ಧಾರ್ಮಿಕ, ಶುಭ ಕಾರ್ಯಗಳಿಗೆ ವೀಳ್ಯದೆಲೆ ಬೇಕೇ ಬೇಕು. ಮಾರುಕಟ್ಟೆಯಲ್ಲಿ ಸದ್ಯ ಒಳ್ಳೆ ಬೆಲೆಯೂ ಇದೆ. ಆದರೆ ವೀಳ್ಯಕ್ಕೆ ಹೊಸ ರೋಗ ಬಾಧಿಸಿದೆ. ದಾವಣಗೆರೆ ಜಿಲ್ಲೆಯ ರೈತರನ್ನು ಇದು ಚಿಂತೆಗೀಡು ಮಾಡಿದೆ. ಎಲೆ ಬಳ್ಳಿಗೆ ಅಂಟಿಕೊಂಡಿರುವ ರೋಗದಿಂದ ಬೆಳೆಗಾರರು ಕಂಗಾಲಾಗಿದ್ದಾರೆ.

ಜಿಲ್ಲೆಯ ಹರಿಹರ ತಾಲೂಕಿನ ಬೆಳ್ಳೂಡಿ ಗ್ರಾಮದ ರೈತರು ಬೆಳೆಯುವ ವೀಳ್ಯದೆಲೆ ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಹೆಸರುವಾಸಿ. ಆದರೀಗ ಗ್ರಾಮದ ಸುತ್ತಮುತ್ತ ಎರಡು ಸಾವಿರ ಎಕರೆಯಲ್ಲಿ ಬೆಳೆದಿರುವ ವೀಳ್ಯ ಕಮರಿ ಹೋಗುತ್ತಿದೆ. ಎಲೆ ಬಳ್ಳಿಗೆ ಹಾಗು ಎಲೆಗೆ ಯಾವುದೋ ರೋಗ ಅಂಟಿಕೊಂಡಿದ್ದು ಇಡೀ ರೈತ ಸಮುದಾಯ ದಂಗಾಗಿದೆ. ಇದು ಯಾವ ರೋಗ ಎಂದು ತಿಳಿಯದೆ ರೈತರು ರೋಸಿ ಹೋಗಿದ್ದಾರೆ.

ಪ್ರಸ್ತುತ ಮಾರುಕಟ್ಟೆಯಲ್ಲಿ ವೀಳ್ಯದೆಲೆಗೆ ಬಂಗಾರದ ಬೆಲೆ ಏನೋ ಇದೆ. ಆದರೂ ಕೂಡ ನಿರೀಕ್ಷಿತ ಫಸಲು ಕೈ ಸೇರದೇ ಇರುವುದು ರೈತರಿಗೆ ನಷ್ಟ ಉಂಟಾಗುತ್ತಿದೆ. ಇನ್ನು ವಿಳ್ಯದೆಲೆ ಬೆಳೆಯಲು ಒಂದು ಎಕರೆಗೆ ಕನಿಷ್ಠ ಎಂದರೂ ಒಂದು ಲಕ್ಷ ರೂಪಾಯಿ ಹಣವನ್ನು ರೈತರು ವ್ಯಯಿಸಿದ್ದರು. ಆದರೆ ರೋಗಬಾಧೆಯಿಂದ ಅಸಲು ಕೂಡ ಈ ಸಾರಿ ರೈತರ ಕೈಸೇರದು ಎಂಬ ಮಂಡೆಬಿಸಿ ಶುರುವಾಗಿದೆ. ಇದರ ಪರಿಣಾಮ ರೈತರು ಸಾಲದ ಸುಳಿಯಲ್ಲಿ ಸಿಲುಕುವ ಆತಂಕದಲ್ಲಿದ್ದಾರೆ.

ರೋಗದಿಂದ ಇಡೀ ಎಲೆ ಬಳ್ಳಿ ಒಣಗುತ್ತಿದೆ. ಅದರಲ್ಲಿರುವ ಎಲೆಗಳು ಕಂದು ಬಣ್ಣಕ್ಕೆ ತಿರುಗಿ ಒಣಗಲಾರಂಭಿಸಿವೆ. ಇದರಿಂದ ರೈತರು ಇಡೀ ಬಳ್ಳಿಯನ್ನು ಕಿತ್ತೆಸೆಯುವ ಪರಿಸ್ಥಿತಿ ಬಂದಿದೆ. ಈಟಿವಿ ಭಾರತಕ್ಕೆ ಪ್ರತಿಕ್ರಿಯಿಸಿದ ರೈತ ಸೈಯ್ಯದ್ ಖಾಸಿಂ, "ನಾವು ಮೂರು ಎಕರೆ ಜಮೀನಿನಲ್ಲಿ ಎಲೆಬಳ್ಳಿ ಹಾಕಿದ್ದೇವೆ. ರೋಗ ತಗುಲಿದೆ. ಎಲೆ ಹಾಗು ಬಳ್ಳಿ ಎರಡೂ ಒಣಗುತ್ತಿವೆ. ಇದು ಯಾವ ರೋಗ ಎಂದು ನಮಗೆ ತಿಳಿಯುತ್ತಿಲ್ಲ. ಬೆಳ್ಳೂಡಿ ಗ್ರಾಮದಲ್ಲಿ ಹೆಚ್ಚಾಗಿ ವೀಳ್ಯ ಬೆಳೆಯುತ್ತಾರೆ. ಗ್ರಾಮದ ಸುತ್ತಮುತ್ತ ಬರುವ ಹಳ್ಳಿಗಳಲ್ಲಿ ಒಟ್ಟು 2,000 ಎಕರೆ ಈ ರೀತಿ ಆಗಿದೆ. ಒಂದು ಲಕ್ಷ ಹಣವನ್ನು ನಾವು ಒಂದು ಎಕರೆಗೆ ವ್ಯಯ ಮಾಡುತ್ತಿದ್ದೇವೆ. ಈ ಸಲ ಲಾಭ ಮಾತ್ರ ಮರೀಚಿಕೆಯಾಗಿದೆ. ಇದರ ಬಗ್ಗೆ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲ" ಎಂದು ಅಳಲು ತೋಡಿಕೊಂಡರು.

ರಾಜ್ಯ, ರಾಷ್ಟ್ರ ಮಟ್ಟದಲ್ಲಿ ಫೇಮಸ್: ರಾಜ್ಯವಷ್ಟೇ ಅಲ್ಲದೇ ರಾಷ್ಟ್ರ ಮಟ್ಟದಲ್ಲಿಯೂ ಹೆಸರುವಾಸಿಯಾಗಿರುವ ಬೆಳ್ಳೂಡಿ ಗ್ರಾಮದ ಸುತ್ತಮುತ್ತ ಬೆಳೆಯುವ ವೀಳ್ಯದೆಲೆಯ ಜಮೀನಿನಲ್ಲಿ ಈ ರೋಗ ಕಾಣಿಸಿಕೊಂಡಿದೆ. ಇಲ್ಲಿಯತನಕ ರೋಗ ಯಾವುದೆಂದು ಎಂದು ತಿಳಿದು ಬಂದಿಲ್ಲ. ಸರ್ಕಾರಿ ಗೊಬ್ಬರ, ಸಗಣಿ ಗೊಬ್ಬರ ಹಾಕಿದರೂ ಪ್ರಯೋಜ‌ನ ಆಗುತ್ತಿಲ್ಲ. ರಾಜ್ಯ ಸರ್ಕಾರ ರೈತರ ನೆರವಿಗೆ ಬರಬೇಕು ಎಂದು ಒತ್ತಾಯಿಸಲಾಗುತ್ತಿದೆ.

ಇದನ್ನು ಓದಿ:ದಾವಣಗೆರೆ: ಹಳೆಯ ದ್ವೇಷಕ್ಕೆ 200 ಅಡಿಕೆ ಗಿಡ ಕಡಿದು ಹಾಕಿದ ದುಷ್ಕರ್ಮಿಗಳು!

Last Updated :Jun 4, 2023, 1:35 PM IST

ABOUT THE AUTHOR

...view details