ಕರ್ನಾಟಕ

karnataka

ಗ್ಯಾರಂಟಿ ಯೋಜನೆ ಜಾರಿಯಿಂದ ಬಿಜೆಪಿಗೆ ಆತಂಕ ಶುರುವಾಗಿದೆ: ಸತೀಶ್​ ಜಾರಕಿಹೊಳಿ

By

Published : Jun 4, 2023, 3:32 PM IST

Updated : Jun 4, 2023, 7:38 PM IST

satish-jarakiholi-reaction-on-bjp

ಬಿಜೆಪಿ ವಿರೋಧ ಪಕ್ಷದಲ್ಲಿದ್ದುಕೊಂಡು ಒಳ್ಳೆಯ ಕೆಲಸ ಮಾಡಲಿ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು.

ಸಚಿವ ಸತೀಶ್​ ಜಾರಕಿಹೊಳಿ

ಬೆಳಗಾವಿ: ಜನರ ಕಲ್ಯಾಣಕ್ಕಾಗಿ ಕಾಂಗ್ರೆಸ್‌ ಪಕ್ಷ ಐದು ಗ್ಯಾರಂಟಿಗಳನ್ನು ಜಾರಿ ಮಾಡಿದೆ. ಇದನ್ನು ನೋಡಿದ ಬಿಜೆಪಿಗೆ ಆತಂಕ ಶುರುವಾಗಿದೆ ಎಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್​ ಜಾರಕಿಹೊಳಿ ಹೇಳಿದರು. ಬೆಳಗಾವಿಯಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಜಾರಿಗೆ ತಂದ ಘೋಷಣೆಗಳನ್ನು ಜನರು ಹೃದಯಪೂರ್ವಕವಾಗಿ ಸ್ವಾಗತ ಮಾಡುತ್ತಿದ್ದಾರೆ. ಈ ವಿಷಯವನ್ನು ಮರೆಮಾಚಲು ಬಿಜೆಪಿಯವರು ಬೇರೆ ಅಸ್ತ್ರ ಹೂಡುತ್ತಿದ್ದಾರೆ. ಇವರ ಬಯಕೆ ಎಂದಿಗೂ ಈಡೇರುವುದಿಲ್ಲ ಎಂದು ಬಿಜೆಪಿ ವಿರುದ್ಧ ಹರಿಹಾಯ್ದರು.

ಎಮ್ಮೆ, ಕೋಣ ಕಡಿಯುವುದಾದರೆ ಹಸು ಏಕೆ ಕಡಿಯಬಾರದು ಎಂದು ಪಶುಸಂಗೋಪನಾ ಇಲಾಖೆಯ ಸಚಿವ ವೆಂಕಟೇಶ್​ ಹೇಳಿಕೆಯನ್ನು ಬಿಜೆಪಿ ದೊಡ್ಡ ಅಸ್ತ್ರವಾಗಿಸಿಕೊಂಡಿದೆ ಎಂಬ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿ, ಬಿಜೆಪಿಯವರಿಗೆ ಇನ್ನು ಐದು ವರ್ಷ ಏನೂ ಕೆಲಸ ಇಲ್ಲ. ಬಿಜೆಪಿಯವರು ಬೋರ್ಡ್ ಬರೆದು ಇಡಬೇಕು ಇನ್ಮೇಲೆ‌. ಹೋರಾಟ, ಗೆಲ್ಲುವವರೆಗೂ ಹೋರಾಟ ಅಂತ.‌ ಇದೇ ಅವರ ಕೆಲಸ ಅದನ್ನೇ ಅವರು ಮಾಡಿದ್ದಾರೆ. ಅಭಿವೃದ್ಧಿಯ ವಿಷಯ ಗೊತ್ತೇ ಇಲ್ಲ ಅವರಿಗೆ. ಕೇವಲ ಕೋಮು, ದ್ವೇಷ ಹರಡಿಸುವುದು, ಗಲಾಟೆ, ಒಬ್ಬರನ್ನೊಬ್ಬರು ಎತ್ತಿ ಕಟ್ಟುವುದು ಇಷ್ಟೇ ಅವರ ಕೆಲಸ.‌ ಯಾರೇ ಹೇಳಿಕೆ ನೀಡಿದರೂ ಸದನದಲ್ಲಿ ಚರ್ಚೆಗೆ ಅವಕಾಶ ಇದೆ ಎಂದು ಹೇಳಿದರು.

ಕರ್ನಾಟಕ ಮಾಡಲ್ ಎಲ್ಲಾ ರಾಜ್ಯಗಳಲ್ಲೂ ಬಂದೇ ಬರುತ್ತದೆ:ಸಚಿವ ವೆಂಕಟೇಶ ಅವರ ಹೇಳಿಕೆಗೆ ಚರ್ಚೆಗೆ ಅವಕಾಶ ಇದೆ. ಸಾಧಕ, ಬಾಧಕ ನೋಡಿ ನಿರ್ಣಯವಾಗುತ್ತದೆ. ಸದ್ಯ ಬಿಜೆಪಿ ವಿರೋಧ ಪಕ್ಷದಲ್ಲಿದ್ದುಕೊಂಡು ಒಳ್ಳೆಯ ಕೆಲಸ ಮಾಡಲಿ. ಅವರ ಸರ್ಕಾರದ ಅವಧಿಯಲ್ಲಿ ಒಳ್ಳೆಯ ಕೆಲಸ ಮಾಡಲು ಸಾಧ್ಯವಾಗಲಿಲ್ಲ ಅವರಿಗೆ ಯಾರೇ ಏನಂದರೂ ಗುರಿಯಾಗಿಟ್ಟುಕೊಂಡು ವಿರೋಧ ಮಾಡುವುದು ಸರಿಯಲ್ಲ. ಯಾವುದೇ ವಿಚಾರ ಇದ್ದರೂ ಸದನದಲ್ಲಿ ಚರ್ಚೆ ಮಾಡಬೇಕು ಎಂದು ಕುಟುಕಿದರು. ಅಲ್ಲದೇ ಕರ್ನಾಟಕ ಮಾಡಲ್ ಎಲ್ಲಾ ರಾಜ್ಯಗಳಲ್ಲೂ ಬಂದೇ ಬರುತ್ತದೆ. ಕರ್ನಾಟಕ ಮಾಡಲ್ ಫೇಮಸ್ ಆಗಿಯೇ ಆಗುತ್ತದೆ ಎಂದರು.

ಒಡಿಶಾದಲ್ಲಿ ರೈಲು ದುರಂತ ಪ್ರಕರಣ ಬಗ್ಗೆ ಪ್ರತಿಕ್ರಯಿಸಿ, ಇದು ದೇಶದಲ್ಲೇ ದೊಡ್ಡ ರೈಲು ದುರಂತ, ಮೃತರ ಆತ್ಮಕ್ಕೆ ಶಾಂತಿ ಸಿಗಲಿ. ಮೃತರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ಕೊಡಲಿ. ಮೃತರ ಕುಟುಂಬಗಳಿಗೆ ಸರ್ಕಾರ, ಪ್ರಧಾನಮಂತ್ರಿ ಅವರು ಹೆಚ್ಚಿನ ಪರಿಹಾರ ಕೊಡಬೇಕು. ಆಯಾ ರಾಜ್ಯ ಸರ್ಕಾರಗಳು ಕೂಡ ಹೆಚ್ಚಿನ ಪರಿಹಾರ ಕೊಡಬೇಕು. ಪ್ರಧಾನಮಂತ್ರಿ ಕಾರ್ಯಾಲಯ 2 ಲಕ್ಷ ರೂ. ಕೊಟ್ಟಿದೆ, ರೈಲ್ವೆ ಇಲಾಖೆ 10 ಲಕ್ಷ ರೂ. ಕೊಟ್ಟಿದೆ. ಪ್ರಧಾನಮಂತ್ರಿ ಕಾರ್ಯಾಲಯ ಪರಿಹಾರ ಹೆಚ್ಚಿಗೆ ಕೊಡಬೇಕು. ಇದರಿಂದ ಮೃತರ ಕುಟುಂಬಕ್ಕೆ ಅನುಕೂಲ ಆಗಲಿದೆ ಎಂದು ಒತ್ತಾಯಿಸಿದರು.

ಗ್ಯಾರಂಟಿ ಯೋಜನೆ ಜಾರಿಯಾದ್ರೆ ಹಳೆಯ ಯೋಜನೆಗಳ ಬಂದ್ ಆಗುತ್ತವಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ಅನವಶ್ಯಕ ಯೋಜನೆಗಳನ್ನು ಬಂದ್ ಮಾಡುತ್ತೇವೆ. ಜನಪರ ಯೋಜನೆ ಮುಂದುವರೆಸುತ್ತೇವೆ. ಗ್ಯಾರಂಟಿ ಯೋಜನೆ ಘೋಷಣೆಗೆ ಜನರು ನಮ್ಮ ಮೇಲೆ ವಿಶ್ವಾಸ ಇಟ್ಟರು. ಈಗ ಆ ಗ್ಯಾರಂಟಿ ಅನುಷ್ಠಾನ ಮಾಡ್ತಿದ್ದೇವೆ. ಇದು ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್​ಗೆ ಅನುಕೂಲ ಆಗಲಿದೆ. ಈ ಬಾರಿ ಲೋಕಸಭೆಯಲ್ಲಿ ಕರ್ನಾಟಕದಲ್ಲಿ 20 ಸ್ಥಾನ ನಾವು ಗೆಲ್ಲಲೇಬೇಕು. ಬೆಳಗಾವಿ, ಚಿಕ್ಕೋಡಿ ಲೋಕಸಭೆ ಅಭ್ಯರ್ಥಿ ಘೋಷಣೆ ಮಾಡುತ್ತೇವೆ. ಇನ್ನೊಂದು ತಿಂಗಳಲ್ಲಿ ಸಭೆ ಮಾಡುತ್ತೇವೆ. ಆ ಸಭೆಯಲ್ಲಿ ಎಲ್ಲವೂ ಚರ್ಚೆ ಮಾಡಿ ಘೋಷಣೆ ಮಾಡುತ್ತೇವೆ ಎಂದು ಸಚಿವ ಸತೀಶ್​ ಜಾರಕಿಹೊಳಿ ತಿಳಿಸಿದರು.

ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಬೆಳಗಾವಿ-ಮುಂಬೈ ಮಧ್ಯೆಯಾದರೂ ಓಡಿಸಲಿ:ವಂದೇ ಭಾರತ್ ಎಕ್ಸ್‌ಪ್ರೆಸ್‌ ಕೇವಲ ಧಾರವಾಡವರೆಗೆ ಮಾತ್ರ ಸೇವೆ ವಿಚಾರಕ್ಕೆ ಪರೋಕ್ಷವಾಗಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ ಸತೀಶ್ ಜಾರಕಿಹೊಳಿ, ನಮ್ಮ ಬೆಳಗಾವಿ ವಿಮಾನ ನಿಲ್ದಾಣ ಒಳ್ಳೆಯ ರೀತಿ ನಡೆಯುತ್ತಿತ್ತು. ಇಲ್ಲಿಯ ವಿಮಾನಗಳು ಹುಬ್ಬಳ್ಳಿಗೆ ಶಿಫ್ಟ್ ಆಗಿವೆ. ನಮ್ಮ ಅನೇಕ ವಿಮಾನಗಳು ಬಂದ್ ಆಗಿವೆ. ಬಿಜೆಪಿ ಸರ್ಕಾರ, ಬಿಜೆಪಿ‌ ಮಂತ್ರಿಯೊಬ್ಬರು ಇದಕ್ಕೆ ಕಾರಣ. ವಂದೇ ಭಾರತ್ ಎಕ್ಸ್‌ಪ್ರೆಸ್‌ ರೈಲನ್ನು ಬೆಳಗಾವಿ-ಮುಂಬೈ ಮಧ್ಯೆಯಾದರೂ ಓಡಿಸಲಿ. ಈ ಬಗ್ಗೆ ನಾವು ಕೂಡಾ ಚರ್ಚೆ ಮಾಡುತ್ತೇವೆ ಎಂದು ಹೇಳಿದರು.

ಲೋಕಸಭೆ ಚುನಾವಣೆಗೆ ಪುತ್ರಿ ಪ್ರಿಯಾಂಕಾ ಜಾರಕಿಹೊಳಿ‌ ಸ್ಪರ್ಧೆ ಮಾಡ್ತಾರಾ ಎಂಬ ಮಾಧ್ಯಮಗಳ ಪ್ರಶ್ನೆಗೆ, ನೋಡೋಣ ಪಕ್ಷದ ಮುಖಂಡರು ತೀರ್ಮಾನ ಮಾಡ್ತಾರೆ. ಲೋಕಸಭೆ ಚುನಾವಣೆ ಕುರಿತ ಸಭೆ ಬಳಿಕ ಸ್ಪಷ್ಟವಾಗಿ ಗೊತ್ತಾಗಲಿದೆ. ಸಭೆಗೂ ಮುನ್ನ ಯಾರು ಪ್ರಚಾರ ಮಾಡಲು ಆಗುವುದಿಲ್ಲ ಎಂದ ಅವರು, ಜಿಲ್ಲಾ ಉಸ್ತುವಾರಿಗಳ ಹಂಚಿಕೆ ಆಗಬೇಕು, ಅದಷ್ಟು ಬೇಗ ಮಾಡ್ತಾರೆ ಎಂದರು. ಬಳ್ಳಾರಿ ನಾಲಾ ಹೂಳೆತ್ತಿ ಶಾಶ್ವತ ಪರಿಹಾರಕ್ಕೆ ರೈತರ ಆಗ್ರಹ ವಿಚಾರವಾಗಿ ಪ್ರತಿಕ್ರಿಯಿಸಿ, ಮಳೆಗಾಲದಲ್ಲಿ ಆಗುವ ಅನಾಹುತ ತಡೆಯಲು ಆಗಲ್ಲ ಎಂದರು. ಕೃಷ್ಣಾ, ಭೀಮಾ ನದಿಗೆ ಮಹಾರಾಷ್ಟ್ರದಿಂದ ನೀರು ಬಿಡುಗಡೆಗೆ ಮನವಿ ವಿಚಾರವಾಗಿ ಮಾತನಾಡಿ, ಮಹಾರಾಷ್ಟ್ರದಿಂದ ಮೊನ್ನೆಯಷ್ಟೇ ನೀರು ಬಿಟ್ಟಿದ್ದಾರೆ, ಇನ್ನೊಂದು ವಾರದಲ್ಲಿ ಮಳೆ ಆಗಲಿದೆ ಎಂದು ಸಚಿವ ಸತೀಶ್​ ಜಾರಕಿಹೊಳಿ‌ ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ:ರಾಜ್ಯ ಸರ್ಕಾರದ ಮತ್ತೊಂದು ಗ್ಯಾರಂಟಿ 10 ಕೆಜಿ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿ ಆದೇಶ

Last Updated :Jun 4, 2023, 7:38 PM IST

TAGGED:

ABOUT THE AUTHOR

...view details