ಕರ್ನಾಟಕ

karnataka

ನಿವೃತ್ತ ಜಡ್ಜ್‌ ನೇತೃತ್ವದ ಸಮಿತಿಯಿಂದ ರೈಲು ದುರಂತ ತನಿಖೆ ನಡೆಸಿ: ಸುಪ್ರೀಂ ಕೋರ್ಟ್​ಗೆ ಪಿಐಎಲ್

By

Published : Jun 4, 2023, 2:09 PM IST

ಸುಪ್ರೀಂಕೋರ್ಟ್​ಗೆ ಪಿಐಎಲ್​ ಸಲ್ಲಿಕೆ

ಒಡಿಶಾ ರೈಲು ದುರಂತವನ್ನು ನಿವೃತ್ತ ಜಡ್ಜ್​​ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಲು ಕೋರಿ ಸುಪ್ರೀಂ ಕೋರ್ಟ್​ಗೆ ಅರ್ಜಿ ಸಲ್ಲಿಸಲಾಗಿದೆ.

ನವದೆಹಲಿ:ಒಡಿಶಾದ ಬಾಲಸೋರ್‌ನಲ್ಲಿ ನಡೆದ ಭೀಕರ ತ್ರಿವಳಿ ರೈಲು ದುರಂತದ ಕುರಿತು ತನಿಖೆ ನಡೆಸಲು ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ತಜ್ಞರ ಸಮಿತಿ ರಚಿಸಬೇಕು ಎಂದು ಕೋರಿ ಸುಪ್ರೀಂ ಕೋರ್ಟ್‌ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ (ಪಿಐಎಲ್) ಸಲ್ಲಿಸಲಾಗಿದೆ. ವಕೀಲ ವಿಶಾಲ್ ತಿವಾರಿ ಅವರು ಈ ಅರ್ಜಿ ಸಲ್ಲಿಸಿದ್ದು, 2 ತಿಂಗಳಲ್ಲಿ ತನಿಖೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದ್ದಾರೆ.

ಅಪಘಾತದ ಕಾರಣಗಳನ್ನು ಗುರುತಿಸಲಾಗಿದೆ. ರೈಲ್ವೆ ಇಲಾಖಾಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ ಎಂದು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್​ ಅವರು ಇಂದು ಹೇಳಿಕೆ ನೀಡಿದ್ದು, ಇತ್ತ ಘಟನೆಗೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು. ಭವಿಷ್ಯದಲ್ಲಿ ಇಂತಹ ದುರಂತಗಳು ಸಂಭವಿಸದಂತೆ ತಡೆಯಲು ಗುಣಮಟ್ಟದ ವ್ಯವಸ್ಥೆಯನ್ನು ಜಾರಿಗೆ ತರುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.

ಸಾರ್ವಜನಿಕ ಪ್ರಯಾಣದ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ತಕ್ಷಣವೇ ಜಾರಿಗೆ ಬರುವಂತೆ ಭಾರತೀಯ ರೈಲ್ವೇಯಲ್ಲಿ 'ಕವಚ್​ ಪ್ರೊಟೆಕ್ಷನ್ ಸಿಸ್ಟಮ್' ಎಂಬ ಸ್ವಯಂಚಾಲಿತ ರೈಲು ಸಂರಕ್ಷಣಾ (ಎಟಿಪಿ) ವ್ಯವಸ್ಥೆಯ ಅನುಷ್ಠಾನಕ್ಕೆ ಮಾರ್ಗಸೂಚಿಗಳು ಮತ್ತು ನಿರ್ದೇಶನಗಳನ್ನು ನೀಡಬೇಕು ಎಂದು ಪಿಐಎಲ್ ಕೋರಿದೆ.

ಏನಿದು ಕವಚ್​ ಯೋಜನೆ?:ಕವಚ್ ಎಂಬುದು ಭಾರತೀಯ ರೈಲ್ವೆಯ ಸ್ವಯಂಚಾಲಿತ ಸುರಕ್ಷತಾ ವ್ಯವಸ್ಥೆ. ಈ ವ್ಯವಸ್ಥೆಯ ಮೂಲಕ ರೈಲು ಅಪಘಾತಗಳನ್ನು ತಡೆಯಲು ರೈಲ್ವೆ ಯೋಜನೆ ರೂಪಿಸುತ್ತಿದೆ. ಇದು ಪ್ರಸ್ತುತ ಕೆಲವು ವಿಧಾನಗಳಲ್ಲಿ ಲಭ್ಯವಿದೆ. ಇದು ರೈಲ್ವೇ ಸಿಗ್ನಲ್ ವ್ಯವಸ್ಥೆಯೊಂದಿಗೆ ಹಳಿಗಳ ಮೇಲೆ ಓಡುವ ರೈಲುಗಳ ವೇಗವನ್ನು ನಿಯಂತ್ರಿಸುತ್ತದೆ. ಇದರಿಂದ ರೈಲು ಅಪಘಾತಗಳನ್ನು ಪರಿಶೀಲಿಸಬಹುದು. ಲೊಕೊ ಪೈಲಟ್ ಕೆಂಪು ಸಿಗ್ನಲ್ ಅನ್ನು ನಿರ್ಲಕ್ಷಿಸಿ ರೈಲು ಚಲಿಸಿದರೆ, ಸ್ವಯಂಚಾಲಿತವಾಗಿ ಬ್ರೇಕ್ ಹಾಕಲಾಗುತ್ತದೆ. ರೈಲು ಅಪಘಾತಗಳನ್ನು ತಡೆಯಲು ಈ ಕವಚ ವ್ಯವಸ್ಥೆಯನ್ನು ಜಾರಿಗೆ ತರಲು ಹೊರಟಿರುವುದಾಗಿ ರೈಲ್ವೆ ಸಚಿವಾಲಯ ಕೆಲವು ತಿಂಗಳ ಹಿಂದೆ ಘೋಷಿಸಿತ್ತು.

ಸಾವಿನ ಸಂಖ್ಯೆ:ರೈಲು ದುರಂತದಲ್ಲಿ ಸಾವನ್ನಪ್ಪಿದ್ದು, 288 ಅಲ್ಲ, 275 ಜನರು. ಕೆಲವು ದೇಹಗಳನ್ನು ಎರಡೆರಡು ಬಾರಿ ಎಣಿಸಿದ್ದು ಕಂಡುಬಂದಿದೆ. ಆದ್ದರಿಂದ ಸಾವಿನ ಸಂಖ್ಯೆಯನ್ನು 275 ಕ್ಕೆ ಪರಿಷ್ಕರಿಸಲಾಗಿದೆ. 275 ರಲ್ಲಿ 88 ದೇಹಗಳನ್ನು ಗುರುತಿಸಲಾಗಿದೆ. ಅಲ್ಲದೇ, ಗಾಯಗೊಂಡ 1,175 ಮಂದಿಯಲ್ಲಿ 793 ಮಂದಿಗೆ ಚಿಕಿತ್ಸೆ ನೀಡಿ ಬಿಡುಗಡೆ ಮಾಡಲಾಗಿದೆ. ಮತ್ತಷ್ಟು ಅಂಕಿಅಂಶವನ್ನು ಬಿಡುಗಡೆ ಮಾಡಲಾಗುವುದು ಎಂದು ಒಡಿಶಾ ಮುಖ್ಯ ಕಾರ್ಯದರ್ಶಿ ಪ್ರದೀಪ್ ಜೆನಾ ಅವರು ತಿಳಿಸಿದ್ದಾರೆ.

ಪ್ರಾಥಮಿಕ ತನಿಕೆಯ ಪ್ರಕಾರ, ಸಿಗ್ನಲಿಂಗ್‌ನಲ್ಲಿ ಕೆಲವು ಸಮಸ್ಯೆಗಳಿವೆ. ರೈಲ್ವೆ ಸುರಕ್ಷತಾ ಆಯುಕ್ತರ ವಿವರವಾದ ವರದಿಗಾಗಿ ಕಾಯುತ್ತಿದ್ದೇವೆ. ಕೋರಮಂಡಲ್ ಎಕ್ಸ್​ಪ್ರೆಸ್ ಮಾತ್ರ ಅಪಘಾತಕ್ಕೀಡಾಗಿದೆ. ರೈಲು ಸುಮಾರು 128 ಕಿಮೀ ವೇಗದಲ್ಲಿತ್ತು. ಹೀಗಾಗಿ ಭೀಕರ ಸೃಷ್ಟಿಯಾಗಿದೆ ಎಂದು ರೈಲ್ವೆ ಮಂಡಳಿಯ ಕಾರ್ಯಾಚರಣೆ ಮತ್ತು ವ್ಯಾಪಾರ ಅಭಿವೃದ್ಧಿ ಅಧಿಕಾರಿ ಜಯ ವರ್ಮ ಸಿನ್ಹಾ ಅವರು ತಿಳಿಸಿದರು.

100 ಶವಗಳು ಏಮ್ಸ್​ಗೆ ರವಾನೆ

100 ಶವಗಳು ಏಮ್ಸ್​ಗೆ ರವಾನೆ:ರೈಲು ದುರಂತದ 100 ಮೃತದೇಹಗಳನ್ನು ಸಂರಕ್ಷಣೆ ಮತ್ತು ಮೃತರ ಕುಟುಂಬಸ್ಥರಿಗೆ ವರ್ಗಾಯಿಸಲು ಅನುಕೂಲವಾಗುವಂತೆ ಭುವನೇಶ್ವರದ ಏಮ್ಸ್‌ಗೆ ತರಲಾಗಿದೆ. ಸುಮಾರು 88 ಶವಗಳನ್ನು ಗುರುತಿಸಲಾಗಿದ್ದು, ಶವಪರೀಕ್ಷೆಯ ನಂತರ ಕುಟುಂಬ ಸದಸ್ಯರಿಗೆ ಹಸ್ತಾಂತರಿಸಲಾಗುತ್ತದೆ. ಅಪರಿಚಿತ ಶವಗಳನ್ನು ಭಾನಗಾ ಹೈಸ್ಕೂಲ್ ಮತ್ತು ಬಾಲಸೋರ್‌ನ ಹೊರವಲಯದಲ್ಲಿರುವ ಉತ್ತರ ಒಡಿಶಾ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿಯ (ಎನ್‌ಒಸಿಸಿಐ) ಪಾರ್ಕ್‌ನಲ್ಲಿನ ತಾತ್ಕಾಲಿಕ ಶವಾಗಾರದಲ್ಲಿ ಇರಿಸಲಾಗಿದೆ.

ಇದನ್ನೂ ಓದಿ:ಎಲೆಕ್ಟ್ರಾನಿಕ್​ ಇಂಟರ್​ಲಾಕಿಂಗ್​ ಸಿಸ್ಟಮ್ ಸಮಸ್ಯೆಯಿಂದ ರೈಲು ದುರಂತ: ಸಚಿವ ಅಶ್ವಿನಿ ವೈಷ್ಣವ್

ABOUT THE AUTHOR

...view details