ETV Bharat / state

"ಮೋದಿ, ಮೋದಿ, ಮೋದಿ ಅಂದವರಿಗೆ ಮೋದಿ ತಿರುಪತಿ ತಿಮ್ಮಪ್ಪನ 3 ನಾಮ ಹಾಕಿದ್ದಾರೆ": ಸಿಎಂ ಸಿದ್ದರಾಮಯ್ಯ - CM Siddaramaiah

author img

By ETV Bharat Karnataka Team

Published : Apr 26, 2024, 7:14 AM IST

Updated : Apr 26, 2024, 8:25 AM IST

'ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷದಲ್ಲಿ ಸುಳ್ಳು ಭರವಸೆಗಳನ್ನು ನೀಡಿದ್ದಾರೆ. ಯುವಕರಿಗೆ ಉದ್ಯೋಗ ನೀಡುತ್ತೇನೆ ಎಂದು ಈಗ ಪಕೋಡಾ ಮಾರಿ ಎನ್ನುತ್ತಿದ್ದಾರೆ' ಎಂದು ಹುಬ್ಬಳ್ಳಿಯಲ್ಲಿ ನಡೆದ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ ಟೀಕಿಸಿದ್ದಾರೆ.

ಸಿಎಂ ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ

ಸಿಎಂ ಸಿದ್ದರಾಮಯ್ಯ

ಹುಬ್ಬಳ್ಳಿ: 10 ವರ್ಷಗಳಿಂದ ಬಿಜೆಪಿ ಕೇಂದ್ರದಲ್ಲಿ ಅಧಿಕಾರದಲ್ಲಿದೆ. ಈ 10 ವರ್ಷಗಳಲ್ಲಿ ನರೇಂದ್ರ ಮೋದಿ ಅವರು ದೇಶದಲ್ಲಿ ಏನು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ?, ಅವರು ನುಡಿದಂತೆ ನಡೆದಿದ್ದಾರಾ?, ಈ ವಿಚಾರಗಳನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ನಿಮ್ಮಲ್ಲಿ ಕಳಕಳಿಯಿಂದ ಮನವಿ ಮಾಡುತ್ತೇನೆ ಎಂದು ಹುಬ್ಬಳ್ಳಿ ಜನತೆಗೆ ಸಿಎಂ ಸಿದ್ದರಾಮಯ್ಯ ಕರೆ ನೀಡಿದ್ದಾರೆ.

ಹುಬ್ಬಳ್ಳಿಯಲ್ಲಿ ನಡೆದ ಪ್ರಜಾಧ್ವನಿ-2 ಜನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದ ಅವರು, "2014 ರಲ್ಲಿ ನರೇಂದ್ರ ಮೋದಿ ಅವರು ದೇಶದ ಪ್ರಧಾನ ಮಂತ್ರಿ ಆದರು. ಅವರು ಚುನಾವಣಾ ಸಂದರ್ಭದಲ್ಲಿ ಅನೇಕ ಭರವಸೆಗಳನ್ನು ಈ ದೇಶಕ್ಕೆ ನೀಡಿ ಭ್ರಮೆಯನ್ನು ಹುಟ್ಟಿಸಿದರು. ಮೋದಿ ಅವರು ದೇಶದ ಭವಿಷ್ಯವನ್ನು ರೂಪಿಸುತ್ತೇನೆ ಎಂದು ಹೇಳಿದ್ದರು. ಹೀಗಾಗಿ ನರೇಂದ್ರ ಮೋದಿ ಅವರಿಗೆ ಒಂದು ಅವಕಾಶ ಕೊಡುವ ಎಂದು ದೇಶದ ಜನತೆ ಅವರಿಗೆ ಬಹುಮತವನ್ನು ಕೊಟ್ಟು ಅವರನ್ನು ಪ್ರಧಾನಿ ಮಂತ್ರಿ ಮಾಡಿದರು. ಬಳಿಕ ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುವುದಾಗಿ ಹೇಳಿದ ಪ್ರಧಾನಿ ಮೋದಿ ಅವರು ಈಗ ಕೆಲಸ ಕೊಡಿ ಅಂದರೆ ಹೋಗಿ ಪಕೋಡಾ ಮಾರಿ ಅನ್ನುತ್ತಿದ್ದಾರೆ. ಮೋದಿ, ಮೋದಿ, ಮೋದಿ ಅಂತ ಕುಣಿಯುತ್ತಿದ್ದ ನಮ್ಮ ಯುವ ಸಮೂಹಕ್ಕೆ ಮೋದಿ ಮೂರು ನಾಮ ಇಟ್ಟಿದ್ದಾರೆ" ಎಂದು ವ್ಯಂಗ್ಯವಾಡಿದರು.

ಮೋದಿ ಆರ್ಥಿಕ ನೀತಿಯಿಂದ ಹಣದುಬ್ಬರ-ಸಿಎಂ: "ಮೋದಿ ರೈತರ ಆದಾಯ ದುಪ್ಪಟ್ಟು ಮಾಡುತ್ತೀನಿ ಎಂದಿದ್ದರು, ಆದರೆ ಈಗ ಕೃಷಿ ಖರ್ಚು ಮೂರು ಪಟ್ಟಾಗಿದೆ. ಡೀಸೆಲ್, ಪೆಟ್ರೋಲ್, ಗ್ಯಾಸ್, ರಸಗೊಬ್ಬರ, ಬೇಳೆ ಕಾಳು, ಅಡುಗೆ ಎಣ್ಣೆ ಎಲ್ಲದರ ಬೆಲೆ ಗಗನಕ್ಕೆ ಏರಿಸಿ "ಅಚ್ಚೇ ದಿನ್ ಆಯೆಗಾ" ಅಂತ ಡೈಲಾಗ್ ಹೊಡೆಯುತ್ತಾ ಕಾಲ ಕಳೆದರು" ಎಂದು ಟೀಕಿಸಿದರು. "ಅಷ್ಟೇ ಅಲ್ಲದೇ, ಡಾಲರ್​ ಎದುರು ರೂಪಾಯಿ ಮೌಲ್ಯ ವೃದ್ಧಿಸುವುದಾಗಿ ಭಾಷಣ ಮಾಡಿದರು. ಆದರೆ ರೂಪಾಯಿ ಮೌಲ್ಯ ಕುಸಿಯುವಂತೆ ಮಾಡಿದ್ದಾರೆ. ಮೋದಿಯವರ ಕೆಟ್ಟ ಆರ್ಥಿಕ ನೀತಿಯಿಂದ ಸೃಷ್ಟಿಯಾದ ಹಣದುಬ್ಬರ, ಬೆಲೆ ಏರಿಕೆಯಿಂದ ತತ್ತರಿಸಿದ್ದ ರಾಜ್ಯದ ಬಡವರು ಮತ್ತು ಮಧ್ಯಮ ವರ್ಗದವರ ಸಂಕಷ್ಟಗಳಿಗೆ ಸ್ಪಂದಿಸುವ ಉದ್ದೇಶದಿಂದಲೇ ನಾವು ಐದು ಗ್ಯಾರಂಟಿಗಳನ್ನು ಘೋಷಿಸಿದೆವು.

"ನಮ್ಮ ಸರ್ಕಾರ ಬಂದ ದಿನದಿಂದಲೇ ಎಲ್ಲ ಗ್ಯಾರಂಟಿಗಳನ್ನು ಜಾರಿ ಮಾಡಲು ಮುಂದಾದೆವು. ಕೇವಲ 8 ತಿಂಗಳಲ್ಲಿ ಎಲ್ಲ ಐದು ಗ್ಯಾರಂಟಿಗಳನ್ನೂ ಜಾರಿ ಮಾಡಿ ಪ್ರತೀ ಕುಟುಂಬಗಳ ಕಷ್ಟಕ್ಕೆ ಸ್ಪಂದಿಸಿ ನೀವು ನಮಗೆ ಕೊಟ್ಟ ಮತಕ್ಕೆ ಗೌರವ ತಂದಿದ್ದೇವೆ" ಎಂದು ತಮ್ಮ ಸರ್ಕಾರವನ್ನು ಸಮರ್ಥಿಸಿಕೊಂಡರು.

5 ವರ್ಷವೂ ಗ್ಯಾರಂಟಿ ಜಾರಿ: "ಚಿನ್ನಪ್ಪರೆಡ್ಡಿ ಆಯೋಗದ ವರದಿಯಂತೆ ರಾಜ್ಯದಲ್ಲಿ ಮೀಸಲಾತಿ ನೀತಿ ಜಾರಿಯಲ್ಲಿದೆ. ಆದರೆ ಈ ವಿಚಾರದಲ್ಲೂ ಮೋದಿ ಮತ್ತು ಬಿಜೆಪಿ ಸುಳ್ಳು ಹೇಳುತ್ತಿದೆ. ಸ್ವತಃ ಬಸವರಾಜ ಬೊಮ್ಮಾಯಿ ಅವರ ಬಿಜೆಪಿ ಸರ್ಕಾರವೇ ಸುಪ್ರೀಂಕೋರ್ಟ್ ಎದುರು ಮುಸ್ಲೀಮರ ಮೀಸಲಾತಿಯನ್ನು ರಾಜ್ಯದಲ್ಲಿ ಯಥಾವತ್ತಾಗಿ ಮುಂದುವರೆಸುತ್ತೇವೆ ಎಂದು ತಿಳಿಸಿದ್ದಾರೆ. ಇದು ನಿಮಗೆ ಗೊತ್ತಿಲ್ಲವೇ ಮೋದಿಯವರೇ" ಎಂದು ಸಿಎಂ ಪ್ರಶ್ನಿಸಿದರು. "ಬಿಜೆಪಿಯು ಪಾರ್ಲಿಮೆಂಟ್ ಚುನಾವಣೆ ಬಳಿಕ ಗ್ಯಾರಂಟಿಗಳು ಬಂದ್ ಆಗುತ್ತದೆ ಎನ್ನುತ್ತಿದ್ದಾರೆ. ಆದರೆ 5 ವರ್ಷವೂ ನಮ್ಮ ಗ್ಯಾರಂಟಿಗಳು ಜಾರಿಯಲ್ಲಿರುತ್ತವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಇದನ್ನೂ ಓದಿ: 'ನೇಹಾ ಕುಟುಂಬದ ಜೊತೆ ನಾವಿದ್ದೇವೆ, ಬಿಜೆಪಿ ರಾಜಕೀಯ ಮಾಡುತ್ತಿದೆ': ವಿದ್ಯಾರ್ಥಿನಿ ನಿವಾಸಕ್ಕೆ ಸಿಎಂ ಭೇಟಿ - CM Siddaramaiah

Last Updated : Apr 26, 2024, 8:25 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.