ETV Bharat / state

'ಬಿಜೆಪಿ ನಾಯಕರೇ, ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಮತ್ತೆ ಯಾಕೆ ಬಡಿಸಿಕೊಳ್ತೀರಿ?': ಸಿಎಂ ಕಿಡಿ - CM Siddaramaiah

author img

By ETV Bharat Karnataka Team

Published : May 8, 2024, 4:52 PM IST

ಹೊಸಕೋಟೆ ದೇವಸ್ಥಾನದ ಬ್ರಹ್ಮೋತ್ಸವ ಸಮಿತಿ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

siddaramaiah
ಸಂಗ್ರಹ ಚಿತ್ರ (ETV Bharat)

ಬೆಂಗಳೂರು: ''ಬಿಜೆಪಿ ನಾಯಕರೇ, ನಮ್ಮ ಕೈಗೆ ಬಡಿಗೆ ಕೊಟ್ಟು ಮತ್ತೆ ಮತ್ತೆ ಯಾಕೆ ಬಡಿಸಿಕೊಳ್ತೀರಿ? ನಿಮ್ಮ ಸುಳ್ಳುಗಳನ್ನು ಬಯಲು ಮಾಡಲು ಅವಕಾಶ ಕೊಟ್ಟು ಸಮಾಜದ ಎದುರು ಯಾಕೆ ಬೆತ್ತಲಾಗುತ್ತೀರಿ?'' ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.

ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್​ನಲ್ಲಿ ಪೋಸ್ಟ್​ ಮಾಡಿರುವ ಅವರು, ''ಕಾಂಗ್ರೆಸ್ ಸರ್ಕಾರ ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಂ ಸಮುದಾಯದ ನವಾಜ್ ಅವರನ್ನು ಸದಸ್ಯರನ್ನಾಗಿ ಮಾಡಿದೆ ಎಂದು ಎದೆಬಡಿದುಕೊಳ್ಳುತ್ತೀರಲ್ಲಾ? ನಿಮ್ಮದೇ ಪಕ್ಷದ ಸರ್ಕಾರ 2020 ಮತ್ತು 2022 ರ ಸಾಲಿನಲ್ಲಿ ಇದೇ ಬ್ರಹ್ಮೋತ್ಸವ ಸಮಿತಿಗೆ ಮುಸ್ಲಿಂ ಸಮುದಾಯದ ವ್ಯಕ್ತಿಗಳನ್ನು ಸದಸ್ಯರನ್ನಾಗಿ ಮಾಡಿತ್ತು. ನಿಮ್ಮಲ್ಲಿ ಈಗ ಉಕ್ಕಿ ಹರಿಯುತ್ತಿರುವ ಹಿಂದುತ್ವದ ಅಭಿಮಾನ ಆಗ ಎಲ್ಲಿ ಅಡಗಿ ಕೂತಿತ್ತು?'' ಎಂದು ಪ್ರಶ್ನೆ ಮಾಡಿದ್ದಾರೆ.

''ಹೊಸಕೋಟೆಯ ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನ ಸರ್ವಧರ್ಮಗಳನ್ನು ಸಮಭಾವದಿಂದ ಕಾಣುವ ಹಿಂದೂ ಧರ್ಮದ ಪರಂಪರೆಗೆ ಸಾಕ್ಷಿಯಾಗಿದೆ. ಅಲ್ಲಿನ ಪ್ರತಿಯೊಂದು ಧಾರ್ಮಿಕ ಕಾರ್ಯಕ್ರಮಗಳಲ್ಲಿಯೂ ಎಲ್ಲ ಧರ್ಮಗಳ ಜನತೆ ಭಕ್ತಿ, ಗೌರವದಿಂದ ಭಾಗವಹಿಸುತ್ತಾರೆ. 2020 ರಲ್ಲಿ ರಾಜ್ಯದಲ್ಲಿ ಅಧಿಕಾರದಲ್ಲಿದ್ದ ಬಿಜೆಪಿ ಸರ್ಕಾರ ಈ ದೇವಸ್ಥಾನದ ಬ್ರಹ್ಮರಥೋತ್ಸವ ಸಮಿತಿಗೆ ಇಮ್ತಿಯಾಜ್ ಪಾಷಾ ಅವರನ್ನು ಸದಸ್ಯರನ್ನಾಗಿ ನೇಮಿಸಿತ್ತು. 2022 ರಲ್ಲಿ ಬಿಜೆಪಿ ಸರ್ಕಾರ ಮತ್ತೆ ಈ ಸಮಿತಿಗೆ ಅಪ್ಸರ್ ಅವರನ್ನು ಸದಸ್ಯರನ್ನಾಗಿ ಮಾಡಿತ್ತು'' ಎಂದಿದ್ದಾರೆ.

''ಅವಿಮುಕ್ತೇಶ್ವರ ಸ್ವಾಮಿ ದೇವಸ್ಥಾನದ ಸಂಪತ್ತು ಲೂಟಿ ಮಾಡುವ ದುರುದ್ದೇಶದಿಂದಲೇ ಬಿಜೆಪಿ ಸರ್ಕಾರ ಬ್ರಹ್ಮರಥೋತ್ಸವ ಸಮಿತಿಗೆ ಮುಸ್ಲಿಮರನ್ನು ಸದಸ್ಯರನ್ನಾಗಿ ಮಾಡಿದೆ ಎಂದು ಆರೋಪಿಸುವಷ್ಟು ಕೀಳು ಮಟ್ಟಕ್ಕೆ ನಾನಿಳಿಯಲಾರೆ. ಎಲ್ಲವನ್ನೂ ಕೇಸರಿ ಕಣ್ಣುಗಳಿಂದ ನೋಡುವ ರೋಗದಿಂದ ಶೀಘ್ರ ಗುಣಮುಖರಾಗಿ ಎಂದು ನಿಮಗೂ, ನಿಮ್ಮ ಸರ್ವೋಚ್ಚ ನಾಯಕರಾದ ನರೇಂದ್ರ ಮೋದಿ ಅವರಿಗೆ ಹಾರೈಸುತ್ತೇನೆ'' ಎಂದು ವ್ಯಂಗ್ಯವಾಡಿದ್ದಾರೆ.

''ರಾಜ್ಯದ ಬಿಜೆಪಿ ನಾಯಕರೇ, ನಿಮಗೆ ಮಾನ-ಮರ್ಯಾದೆ ಎನ್ನುವುದೇನಾದರೂ ಇದ್ದರೆ ಮೊದಲು ಜನರನ್ನು ತಪ್ಪುದಾರಿಗೆಳೆಯುವ ಈ ಹೇಳಿಕೆಯನ್ನು ವಾಪಸು ಪಡೆದು, ರಾಜ್ಯದ ಜಾತ್ಯತೀತ ಕನ್ನಡಿಗರ ಕ್ಷಮೆ ಕೇಳಬೇಕು'' ಎಂದು ಸಿಎಂ ಒತ್ತಾಯಿಸಿದ್ದಾರೆ.

ಇದನ್ನೂ ಓದಿ: ಸಿದ್ದರಾಮಯ್ಯ, ಕುಮಾರಸ್ವಾಮಿ, ನನಗೆ ಸಂಸ್ಕಾರ ನೀಡಿದ್ದು ದೇವೇಗೌಡರು: ವಿ ಸೋಮಣ್ಣ - v somanna

ETV Bharat Logo

Copyright © 2024 Ushodaya Enterprises Pvt. Ltd., All Rights Reserved.