ETV Bharat / international

ಅಮೆರಿಕದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಶವವಾಗಿ ಪತ್ತೆ; ತಿಂಗಳಲ್ಲಿ 6ನೇ ಘಟನೆ

author img

By PTI

Published : Feb 7, 2024, 9:19 PM IST

ಅಮೆರಿಕದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಡಾಕ್ಟರೇಟ್ ಮಾಡುತ್ತಿದ್ದ ಭಾರತೀಯ ವಿದ್ಯಾರ್ಥಿಯ ಶವ ಪತ್ತೆಯಾಗಿದೆ.

string-of-attacks-on-indian-students-in-us-continues-yet-another-found-dead
ಅಮೆರಿಕದಲ್ಲಿ ಮತ್ತೊಬ್ಬ ವಿದ್ಯಾರ್ಥಿ ಶವವಾಗಿ ಪತ್ತೆ

ನ್ಯೂಯಾರ್ಕ್(ಅಮೆರಿಕ): ಅಮೆರಿಕದಲ್ಲಿ ಭಾರತೀಯರಿಗೆ ಸಂಬಂಧಿಸಿದಂತೆ ನಿರಂತರವಾಗಿ ಅಹಿಕರ ಘಟನೆಗಳು ಬೆಳಕಿಗೆ ಬರುತ್ತಿವೆ. ಐಟಿ ವಿದ್ಯಾರ್ಥಿಯೊಬ್ಬ ಮಾರಣಾಂತಿಕ ದಾಳಿಗೊಳಗಾದ ಬೆನ್ನಲ್ಲೇ ಮತ್ತೊಬ್ಬ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದಾನೆ. ಜನವರಿಯಿಂದ ಒಂದು ತಿಂಗಳ ಅವಧಿಯಲ್ಲಿ ವರದಿಯಾದ ಆರನೇ ಆಘಾತಕಾರಿ ಘಟನೆ ಇದಾಗಿದೆ.

23 ವರ್ಷದ ಸಮೀರ್ ಕಾಮತ್ ಮೃತ ವಿದ್ಯಾರ್ಥಿ. ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್‌ನಲ್ಲಿ ಸಮೀರ್ ಡಾಕ್ಟರೇಟ್ ಮಾಡುತ್ತಿದ್ದರು. ಸೋಮವಾರ ವಾರೆನ್ ಕೌಂಟಿಯಲ್ಲಿ ಶವವಾಗಿ ಪತ್ತೆಯಾಗಿದ್ದಾರೆ ಎಂದು ಮೆಕ್ಯಾನಿಕಲ್ ಎಂಜಿನಿಯರಿಂಗ್ ಮುಖ್ಯಸ್ಥ ಎಕಾರ್ಡ್ ಗ್ರೋಲ್ ಮಾಹಿತಿ ನೀಡಿದ್ದಾರೆ. ಮ್ಯಸಾಚುಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯದಲ್ಲಿ ಮೆಕ್ಯಾನಿಕಲ್ ಎಂಜಿನಿಯರಿಂಗ್‌ ಪದವಿ ಪಡೆದ ನಂತರ 2021ರಲ್ಲಿ ಪರ್ಡ್ಯೂ ವಿವಿಗೆ ಪ್ರವೇಶ ಪಡೆದಿದ್ದರು ಎಂದು ತಿಳಿಸಿದ್ದಾರೆ.

ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಭಾರತೀಯ ಐಟಿ ವಿದ್ಯಾರ್ಥಿ ಸೈಯದ್ ಮಜಾಹಿರ್ ಅಲಿ ಎಂಬವರ ಮೇಲೆ ಅಮಾನುಷ ಹಲ್ಲೆ ಮಾಡಲಾಗಿದೆ. ಚಿಕಾಗೋ ನಗರದಲ್ಲಿ ಸೈಯದ್ ಮನೆ ಬಳಿಯೇ ಫೆಬ್ರವರಿ 4ರಂದು ಅಪರಿಚಿತ ದುಷ್ಕರ್ಮಿಗಳು ಬೆನ್ನಟ್ಟಿ ಕ್ರೂರವಾಗಿ ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ತುಣುಕುಗಳ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿವೆ. ಸೈಯದ್​ ಮೂಗು ಮತ್ತು ಮುಖದಲ್ಲಿ ರಕ್ತ ಸುರಿಯುವ ಮತ್ತು ಬಟ್ಟೆಗಳ ಮೇಲೆ ರಕ್ತದ ಕಲೆಗಳು ಆಗಿರುವುದು ಈ ವಿಡಿಯೋದಲ್ಲಿ ಕಾಣಬಹುದಾಗಿದೆ.

ಸುಮಾರು ಆರು ತಿಂಗಳ ಹಿಂದೆ ಹೈದರಾಬಾದ್‌ನಿಂದ ಸೈಯದ್​ ಅಮೆರಿಕಗೆ ತೆರಳಿದ್ದರು. ಇಂಡಿಯಾನಾ ವೆಸ್ಲಿಯನ್ ವಿಶ್ವವಿದ್ಯಾಲಯದಿಂದ ಮಾಹಿತಿ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಪದವಿ ಪಡೆಯುತ್ತಿದ್ದಾರೆ. ಅಮೆರಿಕಕ್ಕೆ ಬರುವುದು ನನ್ನ ಕನಸಾಗಿತ್ತು. ನನ್ನ ಕನಸು ಈಡೇರಿಸಲು ಮತ್ತು ನನ್ನ ಮಾಸ್ಟರ್ಸ್​ ಪದವಿ ಮುಂದುವರಿಸಲು ನಾನು ಇಲ್ಲಿಗೆ ಬಂದಿದ್ದೇನೆ. ಆದರೆ, ಈ ಘಟನೆಯು ನನಗೆ ಆಘಾತವನ್ನುಂಟು ಮಾಡಿದೆ ಎಂದು ಅವರು ಸುದ್ದಿ ವಾಹಿನಿಯೊಂದರ ಮುಂದೆ ನೋವು ಹಂಚಿಕೊಂಡಿದ್ದಾರೆ.

ಈ ಘಟನೆಯನ್ನು ಚಿಕಾಗೋದಲ್ಲಿರುವ ಭಾರತದ ರಾಯಭಾರಿ ಕಚೇರಿ ಗಮನಿಸಿದೆ. ದಾಳಿಗೊಳಗಾದ ಸೈಯದ್ ಮಜಾಹಿರ್ ಅಲಿ ಮತ್ತು ಭಾರತದಲ್ಲಿರುವ ಆತ ಪತ್ನಿ ಸೈಯದಾ ರುಖಿಯಾ ಫಾತಿಮಾ ರಜ್ವಿ ಅವರೊಂದಿಗೆ ಸಂಪರ್ಕದಲ್ಲಿದ್ದೇವೆ. ಇವರಿಗೆ ಸಾಧ್ಯವಿರುವ ಎಲ್ಲ ಸಹಾಯ ಮಾಡಲಾಗುತ್ತದೆ. ಈ ಪ್ರಕರಣದ ತನಿಖೆ ಸಂಬಂಧ ಸ್ಥಳೀಯ ಅಧಿಕಾರಿಗಳನ್ನು ಸಂಪರ್ಕಿಸಲಾಗಿದೆ ಎಂದು ಕಾನ್ಸುಲೇಟ್ ಜನರಲ್ ಸಾಮಾಜಿಕ ಜಾಲತಾಣ 'ಎಕ್ಸ್​'ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಮತ್ತೊಂದೆಡೆ, ಸೈಯದ್ ಪತ್ನಿ ರುಖಿಯಾ ಫಾತಿಮಾ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರನ್ನು ಸಂಪರ್ಕಿಸಿದ್ದಾರೆ. ತನ್ನ ಮೂವರು ಅಪ್ರಾಪ್ತ ಮಕ್ಕಳೊಂದಿಗೆ ಅಮೆರಿಕಗೆ ಪ್ರಯಾಣಿಸಲು ನೆರವು ಕಲ್ಪಿಸುವಂತೆ ಅವರು ಕೋರಿದ್ದಾರೆ.

ಕಳೆದ ವಾರ ಓಹಿಯೋ ರಾಜ್ಯದ ಲಿಂಡ್ನರ್ ಸ್ಕೂಲ್ ಆಫ್ ಬ್ಯುಸಿನೆಸ್‌ ವಿದ್ಯಾರ್ಥಿಯಾಗಿದ್ದ 19 ವರ್ಷದ ಶ್ರೇಯಸ್ ರೆಡ್ಡಿ ಬೆನಿಗರ್ ಶವವಾಗಿ ಪತ್ತೆಯಾಗಿದ್ದರು. ಇಂಡಿಯಾನಾದ ಪರ್ಡ್ಯೂ ವಿಶ್ವವಿದ್ಯಾಲಯದಲ್ಲಿ ಓದುತ್ತಿದ್ದ ನೀಲ್ ಆಚಾರ್ಯ ಎಂಬ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಜನವರಿ 28ರಂದು ನಾಪತ್ತೆಯಾಗಿದ್ದರು. ಅಲ್ಲಿಂದ ಕೆಲವು ದಿನಗಳ ನಂತರ ಅವರು ಸಾವನ್ನಪ್ಪಿರುವುದು ಖಚಿತವಾಗಿತ್ತು.

ಜನವರಿ 16ರಂದು ಜಾರ್ಜಿಯಾ ರಾಜ್ಯದ ಲಿಥೋನಿಯಾ ನಗರದಲ್ಲಿ ಎಂಬಿಎ ಪದವೀಧರ, 25 ವರ್ಷದ ವಿವೇಕ್ ಸೈನಿ ಹತ್ಯೆ ಮಾಡಲಾಗಿತ್ತು. ಮಾದಕ ವ್ಯಸನಿಯೊಬ್ಬ ತಲೆಗೆ ಸುತ್ತಿಗೆಯಿಂದ ಹೊಡೆದು ಸಾಯಿಸಿದ್ದ. ಈ ಭಯಾನಕ ಘಟನೆ ಕ್ಯಾಮರಾದಲ್ಲಿ ಸೆರೆಯಾಗಿದ್ದವು. ಇದಕ್ಕೂ ಮುನ್ನ ಇಲಿನಾಯ್ಸ್ ಅರ್ಬಾನಾ ಚಾಂಪೇನ್ ವಿಶ್ವವಿದ್ಯಾಲಯದಲ್ಲಿ 18 ವರ್ಷದ ಅಕುಲ್ ಬಿ.ಧವನ್ ಎಂಬ ವಿದ್ಯಾರ್ಥಿ ಶವವಾಗಿ ಪತ್ತೆಯಾಗಿದ್ದರು.

ಇದನ್ನೂ ಓದಿ: ಅಮೆರಿಕಾದಲ್ಲಿ ಮತ್ತೆ ಭಾರತೀಯ ವಿದ್ಯಾರ್ಥಿ ಮೇಲೆ ದಾಳಿ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.