ETV Bharat / state

ಬಗೆಹರಿಯದ ಮೂಲಭೂತ ಸಮಸ್ಯೆ: ಶಿರಸಿ ಲಿಡ್ಕರ್ ಕಾಲೊನಿಯಲ್ಲಿ ಮತದಾನ ಬಹಿಷ್ಕಾರ

author img

By

Published : Apr 4, 2023, 4:06 PM IST

ವಿಧಾನಸಭಾ ಚುನಾವಣೆ ಸಮೀಪಿಸುತ್ತಿರುವುದರಿಂದ ಸಮಸ್ಯೆಗಳು ಬಗೆಹರಿಯದ ಕಾರಣ ಹಲವಾರು ಗ್ರಾಮಗಳ ಜನರು ಈ ಬಾರಿ ಮತದಾನ ಬಹಿಷ್ಕಾರ ಮಾಡುವುದಾಗಿ ಘೋಷಿಸಿದ್ದಾರೆ.

Boycott of voting in Shirsi Lidkar Colony
ಬಗೆಹರಿಯದ ಮೂಲಭೂತ ಸಮಸ್ಯೆ: ಶಿರಸಿ ಲಿಡ್ಕರ್ ಕಾಲೊನಿಯಲ್ಲಿ ಮತದಾನ ಬಹಿಷ್ಕಾರ

ಶಿರಸಿ (ಉತ್ತರ ಕನ್ನಡ) : ಕಳೆದ ಹಲವು ವರ್ಷಗಳಿಂದ ಬೇಡಿಕೆಯಿದ್ದರೂ ಮೂಲಭೂತ ಸಮಸ್ಯೆ ಬಗೆಹರಿಸದ ಕಾರಣ ಶಿರಸಿ ನಗರದ ಲಿಡ್ಕರ್ ಕಾಲೋನಿಯಲ್ಲಿ ಮತದಾನ ಬಹಿಷ್ಕರಿಸಲಾಗಿದೆ. ಯಾವುದೇ ಪಕ್ಷದವರು ಪ್ರಚಾರಕ್ಕೆ ಬಾರದಂತೆ ಬೋರ್ಡ್​ ಹಾಕಲಾಗಿದೆ.

ಅಂದಾಜು 24 ಮನೆಗಳಿರುವ ಲಿಡ್ಕರ್ ಕಾಲೊನಿಯಲ್ಲಿ ದಲಿತ ನಿವಾಸಿಗಳಿದ್ದು, 126 ಮತಗಳಿದೆ. ಚುನಾವಣೆಗಾಗಿ ದಲಿತರನ್ನು ಬಳಸಿಕೊಂಡು ನಂತರ ಯಾವುದೇ ಸವಲತ್ತನ್ನು ನೀಡುವುದಿಲ್ಲ ಎಂಬ ಕಾರಣಕ್ಕಾಗಿ ಚುನಾವಣೆ ಬಹಿಷ್ಕಾರ ಮಾಡಲಾಗಿದೆ. ಕಳೆದ ಬಾರಿಯೂ ಇವರು ಚುನಾವಣೆ ಬಹಿಷ್ಕರಿಸಿದ್ದರು. ಆಗ ಅಧಿಕಾರಿಗಳು ಭವರಸೆ ನೀಡಿದ ನಂತರ ಬಹಿಷ್ಕಾರ ಹಿಂಪಡೆದಿದ್ದರು.

ಆರ್ಥಿಕವಾಗಿ ಹಿಂದುಳಿದ ದಲಿತ ಕುಟುಂಬ ಇರುವ ಲಿಡ್ಕರ್ ಕಾಲೊನಿಯನ್ನು ನಗರಸಭೆಗೂ ಸೇರಿಸದೇ, ಸಮೀಪದ ದೊಡ್ನಳ್ಳಿ ಗ್ರಾಮ ಪಂಚಾಯಿತಿಗೂ ಸೇರಿಸದೆ ಅತಂತ್ರ ಮಾಡಿದ್ದು, ದೇಶದಲ್ಲಿ ಇದ್ದಾರೋ ಇಲ್ಲವೋ ಎಂಬಂತ ಸ್ಥಿತಿಯಿದೆ. ಇದರಿಂದ ರಸ್ತೆ, ನೀರು, ಚರಂಡಿ ಯಾವ ಮೂಲಭೂತ ಸೌಕರ್ಯವೂ ಇಲ್ಲದಂತಾಗಿದೆ. ಪರಿಶಿಷ್ಠ ಅನುದಾನವೂ ಇವರಿಗೆ ಇಲ್ಲದಂತಾಗಿದೆ. ಇದೇ ಕಾರಣಕ್ಕೆ ಚುನಾವಣೆ ಬಹಿಷ್ಕಾರ ಮಾಡಲಾಗಿದ್ದು, ಸಮಸ್ಯೆ ಬಗೆಹರಿದಲ್ಲಿ ಮಾತ್ರ ಮತ ಹಾಕುವುದಾಗಿ ತಿಳಿಸಿದ್ದಾರೆ. ‌

ಈ ಹಿಂದೆಯೂ ಚುನಾವಣೆ ಬಹಿಷ್ಕರಿಸಿದ್ದ ಜನ: ಕಳೆದ ಎರಡು ವಿಧಾನಸಭಾ ಚುನಾವಣೆಗಳಲ್ಲಿಯೂ ಇವರು ಮತದಾನ ಬಹಿಷ್ಕರಿಸಿದ್ದರು. ಆಗ ಅಧಿಕಾರಿಗಳು ಬಂದು ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಆದರೆ 10-12 ವರ್ಷಗಳು ಕಳೆದರೂ ಅದೇ ಸಮಸ್ಯೆ ಈಗಲೂ ಮುಂದುವರೆದಿದ್ದು, ಗಬ್ಬು ನಾರುವ ಚರಂಡಿ, ಊರಿನಲ್ಲಿ ದೊಡ್ಡದಾಗಿ ಕಾಡಿನಂತೆ ಬೆಳೆದು ನಿಂತಿರುವ ಗಿಡಗಳು, ರಸ್ತೆಗಳ ಕೊರತೆ ಹೀಗೆ ಎಲ್ಲಾ ಸಮಸ್ಯೆಗಳೂ ಹಾಗೆಯೇ ಇದೆ. ಇದೇ ಕಾರಣದಿಂದ ಊರವರು ಈ ಬಾರಿ ಸಮಸ್ಯೆ ಬಗೆಹರಿದರೆ ಮಾತ್ರ ಮತ ಹಾಕುವುದಾಗಿ ತಿಳಿಸಿದ್ದಾರೆ.‌

ಲಿಡ್ಕರ್ ಕಾಲೊನಿ 5.5 ಎಕರೆ ಇದ್ದು, ಅಲ್ಲಿರುವ ಮನೆಗಳು ಮಾಲೀಕರ ಹೆಸರಿಗೂ ಇಲ್ಲ. ಇದೇ ಕಾರಣದಿಂದ ವಿಧಾನಸಭಾ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಸಹ ಇಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಸಮಸ್ಯೆ ಬಗೆಹರಿಸುವುದಾಗಿ ತಿಳಿಸಿದ್ದರು. ಆದರೆ ಅದೂ ಭರವಸೆಯಾಗಿಯೇ ಉಳಿದಿದ್ದು, ಚುನಾವಣೆ ಬಂದಾಗ ಮಾತ್ರ ಎಲ್ಲರಿಗೂ ದಲಿತರು ನೆನಪಾಗುವುದು ವಿಪರ್ಯಾಸದ ಸಂಗತಿಯಾಗಿದೆ ಎಂದು ಕಾಲೊನಿಯ ಜನರು ಮಾತನಾಡಿಕೊಳ್ಳುತ್ತಿದ್ದಾರೆ.‌

ಇದನ್ನೂ ಓದಿ: 'ರಸ್ತೆ, ಸೇತುವೆ ಮಾತ್ರವಲ್ಲ ಯುವಕರಿಗೆ ಮದುವೆಯೂ ಇಲ್ಲ': ಚುನಾವಣೆ ಬಹಿಷ್ಕಾರಕ್ಕೆ ಮುಂದಾದ ಗ್ರಾಮಸ್ಥರು

ಕಾಫಿನಾಡು ಚಿಕ್ಕಮಗಳೂರು ಜಿಲ್ಲೆ ಹಾಗೂ ಹಾಸನ ಜಿಲ್ಲೆಯ ಕೆಲವು ಗ್ರಾಮಗಳೂ ಕೂಡ ಮೂಲಸೌಕರ್ಯಗಳ ಕೊರತೆಯನ್ನು ವಿರೋಧಿಸಿ ಈ ಬಾರಿಯ ವಿಧಾನಸಭಾ ಚುನಾವಣೆಯನ್ನು ಬಹಿಸ್ಕರಿಸಲು ನಿರ್ಧರಿಸಿವೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ವಿಧಾನಸಭಾ ಕ್ಷೇತ್ರದ ಸುಣ್ಣದ ಗೂಡಿನಲ್ಲಿ ನೆರೆ ಸಂತ್ರಸ್ತರಿಗೆ ಪುನರ್ವಸತಿ ಕಲ್ಪಿಸಲಾಗಿದ್ದು, ಮೂಲಸೌಕರ್ಯವನ್ನು ಕಲ್ಪಿಸದೇ ಇರುವುದರಿಂದ ಗ್ರಾಮಸ್ಥರು ಈ ಬಾರಿ ಚುನಾವಣೆ ಬಹಿಷ್ಕರಿಸಲು ತಿಂಗಳ ಹಿಂದೆಯಷ್ಟೆ ನಿರ್ಧರಿಸಿದ್ದರು.

ಇದೇ ರೀತಿ ಕೊಪ್ಪ ತಾಲೂಕಿನ ಹಾಡುಗಾರ ಗ್ರಾಮದ ರಸ್ತೆ ಅಭಿವೃದ್ಧಿಗೆ ಅನೇಕ ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನ ಆಗಿಲ್ಲ. ಗಡುವು ನೀಡಿದರೂ ಅಭಿವೃದ್ಧಿ ಕೆಲಸ ಆಗಿಲ್ಲ. ಈ ಹಿನ್ನೆಲೆ ಫೆಬ್ರುವರಿ ಪ್ರಾರಂಭದಲ್ಲಿ ಚುನಾವಣಾ ಬಹಿಷ್ಕಾರದ ಬ್ಯಾನರ್​ ಹಾಕಿ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದರು.

ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಬಾಚನಹಳ್ಳಿ ಹಾಗೂ ದೇವಾಲದಕೆರೆಯ ದೋನಹಳ್ಳಿ ಗ್ರಾಮಸ್ಥರು ಕೆಲವು ದಿನಗಳ ಹಿಂದೆಯಷ್ಟೇ ಈ ಬಾರಿ ವಿಧಾನಸಭಾ ಚುನಾವಣೆಗೆ ಮತದಾನ ಬಹಿಷ್ಕಾರ ಮಾಡುವುದಾಗಿ ಹೇಳಿದ್ದರು. ರಸ್ತೆ, ಸೇತುವೆ ಸೇರಿ ಮೂಲಭುತ ಸೌಕರ್ಯ ಕಲ್ಪಿಸಲು ಸರ್ಕಾರ ಹಾಗೂ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ ಎಂದು ದೂರಿದ್ದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.